ಮಾರಶೆಟ್ಟಿಹಳ್ಳಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಡಕೆ ಒಕ್ಕಣೆದಾರರ ಸೌಹಾರ್ದ ಸಹಕಾರ ಸಂಘದ ಸಮಾವೇಶವನ್ನು ಜಿಲ್ಲಾಧ್ಯಕ್ಷ ಕೆ.ವಿ.ಲೋಹಿತ್ ಉದ್ಘಾಟಿಸಿದರು. ಸಂತೋಷ್, ಆನಂದ್, ಶ್ರೀನಿವಾಸ್, ಅಮರ್ ಇತರರಿದ್ದರು.  
ನ್ಯೂಸ್

ದುರಾಸೆ, ಪೈಪೋಟಿಯಿಂದ ನಷ್ಟಕ್ಕೆ ಸಿಲುಕಿದ್ದಾರೆ ಖೇಣಿದಾರರು

ಹೊಳೆಹೊನ್ನೂರು: ಖೇಣಿದಾರರು ಪೈಪೋಟಿ ಬಿಟ್ಟು ಜಾಗೃತರಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಅಡಕೆ ಒಕ್ಕಣೆದಾರರ (ಖೇಣಿದಾರರ) ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಲೋಹಿತ್ ಕಣಿವೆಮನೆ ಹೇಳಿದರು.

ಮಾರಶೆಟ್ಟಿಹಳ್ಳಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಡಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘದ ಸಮಾವೇಶದಲ್ಲಿ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಅಡಕೆ ಬೆಳೆಯಲಾಗುತ್ತಿದೆ. ಖೇಣಿದಾರರ ಸಂಖ್ಯೆಯೂ ಹೆಚ್ಚಾಗಿದೆ. ಹೆಚ್ಚು ಖೇಣಿ ಮಾಡಬೇಕೆಂಬ ಹಠದಿಂದ ಪ್ರತಿಯೊಬ್ಬರೂ ಪೈಪೋಟಿಗೆ ಬಿದ್ದವರಂತೆ ಹೆಚ್ಚು ಬೆಲೆ, ಹೆಚ್ಚು ಒಣ ರಾಶಿ ಅಡಕೆಯನ್ನು ನೀಡುವಂತೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಎಲ್ಲ ಅಡಕೆ ಮಾರುಕಟ್ಟೆಗಳಲ್ಲಿ ಕಳಪೆ ಹಾಗೂ ಕಲಬೆರಕೆ ಅಡಕೆ ಬರುತ್ತಿರುವುದು ಕೂಡ ಮಲೆನಾಡಿನ ಉತ್ಕೃಷ್ಟ ಮಟ್ಟದ ಅಡಕೆ ಬೆಲೆ ಕಳೆದುಕೊಳ್ಳಲು ಕಾರಣ. ಕಲಬೆರಕೆ ಅಡಕೆ ಮಾರಾಟಗಾರರು ಮತ್ತು ಮಿಶ್ರಣ ಮಾಡುತ್ತಿರುವ ಕೆಲ ವ್ಯಾಪಾರಸ್ಥರಿಂದ ರೈತರು ಮತ್ತು ಒಕ್ಕಣೆದಾರರ ನಡುವೆ ಭಿನ್ನಾಭಿಪ್ರಾಯ ಮೂಡುತ್ತಿದೆ. ಆದ್ದರಿಂದ ಒಕ್ಕಣೆದಾರರು ರೈತರಿಗೆ ಅನ್ಯಾಯವಾಗದಂತೆ ಕೆಲ ನಿಯಮ ಪಾಲಿಸಬೇಕಿದೆ. ಕೆ.ವಿ.ಲೋಹಿತ್ ಕಣಿವೆಮನೆ ಶಿವಮೊಗ್ಗ ಜಿಲ್ಲಾ ಅಡಕೆ ಒಕ್ಕಣೆದಾರರ ಸಂಘದ ಅಧ್ಯಕ್ಷ

ಮೂರ‌್ನಾಲ್ಕು ವರ್ಷಗಳಿಂದ ನಿರಂತರವಾಗಿ ವಿವಿಧ ಕಾರಣಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಈ ಬಾರಿಯ ನಷ್ಟ ಎಲ್ಲ ಖೇಣಿದಾರರ ನಿದ್ದೆಗೆಡಿಸಿದೆ. 10-15 ವರ್ಷಗಳಿಂದ ಸಂಪಾದಿಸಿದ್ದ ಎಲ್ಲವನ್ನೂ ಕಳೆದುಕೊಂಡು ಖೇಣಿದಾರರು ಬೀದಿಗೆ ಬಿದ್ದಿದ್ದಾರೆ. ಇನ್ನು ಕೆಲವರು ಸಾವಿಗೆ ಶರಣಾಗಿದ್ದಾರೆ. ಆದರೆ ಇದೆಲ್ಲದಕ್ಕೂ ರೈತರು ಕಾರಣರಲ್ಲ. ನಮ್ಮಲ್ಲಿನ ಪೈಪೋಟಿ ಮತ್ತು ದುರಾಸೆ ಕಾರಣ ಎಂದರು.

ನಿರ್ಣಯಗಳನ್ನು ಅನುಷ್ಠಾನಗೊಳಿಸಿ ರಾಜ್ಯಾದ್ಯಂತ ಅಡಕೆ ಒಕ್ಕಣೆದಾರರ (ಖೇಣಿದಾರರ) ಸೌಹಾರ್ದ ಸಹಕಾರ ಸಂಘವನ್ನು ಸಂಘಟಿಸುವ ಪ್ರಯತ್ನ ಮಾಡಲಾಗುವುದು ಎಂದು ಕೆ.ವಿ.ಲೋಹಿತ್ ಕಣಿವೆಮನೆ ಹೇಳಿದರು. ಖೇಣಿದಾರರು 1 ಎಕರೆ ಅಡಕೆ ತೋಟಕ್ಕೆ 25 ಸಾವಿರ ರೂ.ಗಳನ್ನು ಮಾತ್ರ ಮುಂಗಡ ನೀಡಬೇಕು. ಹಸಿ ಅಡಕೆಯನ್ನು ಹೊಸ ಅಡಕೆ ಧಾರಣೆಗೆ ಪಟ್ಟಿ ಮಾಡಬೇಕು. ಸಾಗರ, ಶಿಕಾರಿಪುರ ಮತ್ತು ಹೊಸನಗರ ಭಾಗಗಳಲ್ಲಿ ಖೇಣಿ ಮಾಡುವವರು ಆ.15ರ ನಂತರ ಕಟಾವು ಆರಂಭಿಸಬೇಕು. ಕಠಾವು ಆರಂಭದಿಂದ ಪ್ರತಿ 30ರಿಂದ 35 ದಿನಗಳಿಗೊಮ್ಮೆ ಕಟಾವು ಮಾಡಬೇಕು. ತೋಟಗಳಲ್ಲಿ ನಾವು ಕಟಿಂಗ್ ಮಾಡಿರುವ ಅಡಕೆಯನ್ನು ಮಾತ್ರ ತರಬೇಕು. ತಾನಾಗಿಯೇ ಉದುರಿರುವ, ಅಂಡುವಡಕ, ಗಿಳಿ ಕಡಿದ ಮತ್ತು ಮಿಳ್ಳೆ ಅಡಕೆಯನ್ನು ತರಬಾರದು. ಹಸಿ ಅಡಕೆಯನ್ನು ತೋಟದಲ್ಲಿ ಜರಡಿ ಹೊಡೆದು ಕಸವನ್ನು ಬೇರ್ಪಡಿಸಿಕೊಂಡು ತೂಕ ಮಾಡಿಕೊಳ್ಳಬೇಕು ಹೀಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಂಘದ ಉಪಾಧ್ಯಕ್ಷ ಗುಟ್ಟಳ್ಳಿ ಸಂತೋಷ್, ನಿರ್ದೇಶಕ ಜಂಬೂರು ಆನಂದ್, ತಟ್ಟೆಹಳ್ಳಿ ಮಲ್ಲೇಶಪ್ಪ, ರಾಮಚಂದ್ರಪ್ಪ, ಬಸವರಾಜ್, ಶ್ರೀನಿವಾಸ್, ಅಮರ್, ಎಸ್.ಎಲ್.ರವಿ, ಎಂ.ಎಸ್.ಬಸವರಾಜ್, ಭೀಮಣ್ಣ, ತಿಮ್ಮಣ್ಣ, ಮಂಜಣ್ಣ, ಬಷೀರ್, ಮಹೇಶ್, ರುದ್ರೋಜಿ ರಾವ್, ಅಶೋಕ್ ರಾವ್, ನವೀನ್ ಇತರರಿದ್ದರು.