ಶಿವಮೊಗ್ಗ: ಹುಣಸೋಡು ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರಭಾವ ಬೀರುತ್ತಿದ್ದಾರೆ. ನಿಸ್ಪಕ್ಷಪಾತ ತನಿಖೆ ನಡೆಯಬೇಕಾದರೆ ರಾಜ್ಯ ಸರ್ಕಾರ ತನಿಖೆಯನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರು ಅಥವಾ ಸಿಬಿಐಗೆ ಒಪ್ಪಿಸಬೇಕೆಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.ಇಡೀ ಮಲೆನಾಡೇ ಬೆಚ್ಚಿ ಬಿದ್ದ ಸ್ಫೋಟ ಸಂಭವಿಸಿ ಎರಡು ತಿಂಗಳು ಕಳೆದಿದ್ದು ತನಿಖೆ ಸಂಪೂರ್ಣ ದಾರಿ ತಪ್ಪುತ್ತಿದೆ.ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ತಕ್ಷಣವೇ ಪ್ರಕರಣದ ಕಿಂಗ್‌ಪಿನ್‌ಗಳನ್ನು ಬಂಧಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅನಧಿಕೃತವಾಗಿ ಕ್ರಷರ್‌ನಲ್ಲಿ ಬ್ಲಾಸ್ಟಿಂಗ್ ಮಾಡುತ್ತಿದ್ದು, ಸ್ಫೋಟದಲ್ಲಿ ಆರು ಜನ ಮೃತಪಟ್ಟಿದ್ದಾರೆ. ಸಚಿವರು ಪೊಲೀಸರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಹಾಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಮನವಿ ಮಾಡಿದರು.ಕ್ರಷರ್ ಮಾಲೀಕ ಬಿ.ವಿ.ಸುಧಾಕರ್, ನರಸಿಂಹ ಸೇರಿ ಹಲವರನ್ನು ಬಂಧಿಸಲಾಗಿದೆ. ಆದರೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿ ಸಚಿವರ ಒತ್ತಡಕ್ಕೆ ಮಣಿದು ಒಂದೆರಡು ದಿನಗಳಲ್ಲೇ ಬಿಟ್ಟು ಕಳುಹಿಸಿದ್ದಾರೆ. ಈ ಮೂಲಕ ಸಚಿವರು ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಫೋಟದ ಸ್ಥಳದಲ್ಲಿ ನಾಲ್ಕು ವಾಹನಗಳಿದ್ದವು ಎಂಬುದು ಮೇಲ್ನೋಕ್ಕೆ ಸಾಬೀತಾಗಿದೆ. ಸ್ಫೋಟದ ಕಾರಣೀಭೂತರಿಗೆ ಶಿಕ್ಷೆ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಅನಧಿಕೃತ ಕ್ರಷರ್‌ಗಳ ಹಿಂದೆ ಬಿಜೆಪಿ ಮುಖಂಡರ ಕೈವಾಡವಿದೆ. ಹಾಗಾಗಿ ತನಿಖೆ ಹಾದಿ ತಪ್ಪಿಸುವ ಕಾರ್ಯ ನಿರಂತರವಾಗಿದೆ ಎಂದು ದೂರಿದರು.
ಪಾಲಿಕೆ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಮಂಜುಳಾ ಶಿವಣ್ಣ, ಆರ್.ಸಿ.ನಾಯ್ಕ,ರೇಖಾ ರಂಗನಾಥ, ಮುಖಂಡ ಕೆ.ರಂಗನಾಥ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.