ಪರಿಸರ ದಿನಾಚರಣೆ ಅಂಗವಾಗಿ ಸಾಗರ ತಾಲೂಕಿನ ಚರಕ ಶ್ರಮಜೀವಿ ಆಶ್ರಮದಲ್ಲಿ ಗಿಡ ನೆಡಲಾಯಿತು. ಡಾ. ಎಂ.ಗಣೇಶ್, ಟೆರೆನ್ಸ್ ಪೀಟರ್, ಮಹಾಲಕ್ಷ್ಮೀ, ರಮೇಶ್ ಇತರರಿದ್ದರು.  
ನ್ಯೂಸ್

ವಿಜಯೋತ್ಸವ ಆಚರಣೆಯಿಂದ ಪರಿಸರ ಮಾಲಿನ್ಯ

ಸಾಗರ: ಸಂಭ್ರಮಾಚರಣೆಯ ಭರಾಟೆಯಲ್ಲಿ ಕರ್ನಾಟಕ ಸೂತಕದ ಮನೆಯಾಗಿದೆ. ಆಟ ವ್ಯಾಪಾರ ಆಗಿದ್ದು, ಅಭಿಮಾನ ಹುಚ್ಚಾಗಬಾರದು. ವಿಜಯೋತ್ಸವ ಆಚರಣೆಯೂ ಪರಿಸರ ಮಾಲಿನ್ಯಕ್ಕೆ ಕಾರಣ ಆಗುತ್ತಿರುವುದನ್ನು ಗಂಭೀರವಾಗಿ ಚಿಂತಿಸಬೇಕಿದೆ ಎಂದು ನೀನಾಸಂ ಪ್ರಾಚಾರ್ಯ ಡಾ. ಎಂ.ಗಣೇಶ್ ಹೇಳಿದರು.

ಸಾಗರ ತಾಲೂಕಿನ ಹೊನ್ನೇಸರ ಚರಕ ಶ್ರಮಜೀವಿ ಆಶ್ರಮದ ಆವರಣದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ಮಾತನಾಡಿ, ಆಟದ ಹುಚ್ಚಿನಿಂದ 11 ಜನ ಸಾವಿಗೀಡಾಗಿದ್ದಾರೆ. ಪಂದ್ಯದ ಗೆಲುವಿನ ನಂತರ ಬೆಂಗಳೂರಿನಲ್ಲಿ ಅಂದು ರಾತ್ರಿ ಕೋಟ್ಯಂತರ ರೂ. ವೆಚ್ಚದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಗಿದೆ. ಇದರಿಂದ ಉಂಟಾಗಿರುವ ಪರಿಸರ ಮಾಲಿನ್ಯ ಊಹಿಸುವುದು ಕಷ್ಟ ಎಂದು ತಿಳಿಸಿದರು.

ಎಷ್ಟೇ ಮಳೆ ಬಂದರೂ ಸಾಕಾಗುತ್ತಿಲ್ಲ, ಎಷ್ಟು ಗಿಡ ನೆಟ್ಟರೂ ಕಡಿಮೆಯಾಗಿದೆ. ವಾತಾವರಣದಲ್ಲಿನ ತಾಪಮಾನ ತಗ್ಗುತ್ತಿಲ್ಲ. ನಾವು ಸೇವಿಸುವ ಗಾಳಿ, ಊರು, ನೀರು ಎಲ್ಲವೂ ಮಾಲಿನ್ಯವಾಗಿವೆ. ವೇಗದ ಅಭಿವೃದ್ಧಿಯ ಫಲ ಇದು. ಇಂತಹ ಅಭಿವೃದ್ಧಿ ಬೇಕೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ಈ ವರ್ಷ ಕೊರಿಯಾ ಗಣರಾಜ್ಯ ವಿಶ್ವ ಪರಿಸರದ ಸಂಕಲ್ಪ ಘೋಷಣೆಯ ನೇತೃತ್ವ ವಹಿಸಿಕೊಂಡಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಈ ವರ್ಷದ ಘೋಷ ವಾಕ್ಯ. ಪ್ಲಾಸ್ಟಿಕ್ ಎನ್ನುವುದು ಬಿಟ್ಟೆನೆಂದರೂ ಬಿಡದಿ ಮಾಯೆ ಎನ್ನುವ ರೀತಿ ಇಡೀ ಪ್ರಪಂಚವನ್ನು ವ್ಯಾಪಿಸಿದೆ. ಇದನ್ನು ಕೊನೆಗಾಣಿಸಲು ವೈಯಕ್ತಿಕ ಮಟ್ಟದಲ್ಲಿ ನಾವೆಲ್ಲವೂ ಪ್ಲಾಸ್ಟಿಕ್ ತ್ಯಜಿಸಲು ಕಂಕಣಬದ್ಧರಾಗಬೇಕು. ಡಾ. ಎಂ.ಗಣೇಶ್ ನೀನಾಸಂ ಪ್ರಾಚಾರ್ಯ

ಚರಕ ಸಂಸ್ಥೆಯ ಸಿಇಒ ಟೆರೆನ್ಸ್ ಪೀಟರ್ ಮಾತನಾಡಿ, ಸ್ವಚ್ಛ ಭಾರತ ಎಂಬುದು ಕಾಗದದಲ್ಲಿ ಮಾತ್ರ ಆಗಿದೆ. ನಮ್ಮೆಲ್ಲರಲ್ಲೂ ನಾಗರಿಕ ಪ್ರಜ್ಞೆ ಕಡಿಮೆಯಾಗಿದೆ. ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಈ ಬಗ್ಗೆ ಪ್ರತಿಯೊಬ್ಬ ನಾಗರಿಕ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಚರಕ ಅಧ್ಯಕ್ಷೆ ಮಹಾಲಕ್ಷ್ಮೀ, ಕಾರ್ಯದರ್ಶಿ ರಮೇಶ್, ನೇಯ್ಗೆ ಸಲಹೆಗಾರ ರಾಮಚಂದ್ರಪ್ಪ, ಬಣ್ಣಗಾರಿಕೆ ವಿಭಾಗದ ಮುಖ್ಯಸ್ಥ ರುದ್ರಪ್ಪ, ವಿವಿಧ ವಿಭಾಗಗಳ ವ್ಯವಸ್ಥಾಪಕರಾದ ಕೃಷ್ಣ, ಪದ್ಮಶ್ರೀ, ಮಧುರಾ, ಲಕ್ಷ್ಮೀನಾರಾಯಣ, ಸುರೇಶ್, ರಾಯ್ಕರ್, ಸತೀಶ್, ಕೇಶವ ಸಂಸ್ಥೆಯ ಉಪಾಧ್ಯಕ್ಷೆ ನಾಗರತ್ನಾ ಉಪಸ್ಥಿತರಿದ್ದರು.