ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಂಜೂರಾದ ಅಮೃತ್-2 ಯೋಜನೆಯಡಿ 2.69 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಪಟ್ಟಣದ ನೀರು ಸರಬರಾಜು ಕೇಂದ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪುರಸಭೆಯಾದರೆ ಸರ್ಕಾರದ ಅನುದಾನವು ಹೆಚ್ಚಾಗಿ ಬರುತ್ತದೆ. ಪಟ್ಟಣದಲ್ಲಿ 14 ಸಾವಿರಕ್ಕಿಂತ ಹೆಚ್ಚಿಗೆ ಜನಸಂಖ್ಯೆ ಆಗುತ್ತಿಲ್ಲ. ಆದ್ದರಿಂದ ಪಟ್ಟಣ ಪಂಚಾಯತಿ ಪುರಸಭೆಯಾಗಲು ಯಡೆಹಳ್ಳಿಕೆರೆ, ಇಂದಾವರ, ತುಡ್ಕಿ, ಬದನೆಹಿತ್ಲು, ಚಿಟ್ಟೆಬೈಲು, ಕುರುವಳ್ಳಿ, ಇಂದಿರಾ ನಗರವನ್ನು ಪಟ್ಟಣಕ್ಕೆ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸರ್ಕಾರದಿಂದ ಪಟ್ಟಣ ಪಂಚಾಯಿತಿಗೆ ಕಡಿಮೆ ಹಣ ಬಂದರೂ ಆ ಹಣ ಬಳಸಿ ಸುಂದರ ಪಟ್ಟಣವಾಗಿ ಮಾಡಲಾಗಿದೆ. ಪಟ್ಟಣದ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವ ಪ್ರಯತ್ನ ಆಗಬೇಕು. ಸರ್ಕಾರದಿಂದ ಬಂದ ಹಣದಲ್ಲಿ ಗುಣಮಟ್ಟದ ಕೆಲಸ ಆಗಬೇಕು ಎಂದರು.
ತೀರ್ಥಹಳ್ಳಿ ಪಟ್ಟಣದ ನೀರು ಸರಬರಾಜು ಘಟಕಕ್ಕೆ ಒಳಚರಂಡಿ ಮಂಡಳಿಯಿಂದ 2 ಕೋಟಿ 69 ಲಕ್ಷ ರೂ. ಹಣ ಬಂದಿದ್ದು, 975 ಅಡಿ ರಸ್ತೆ, 1300 ಅಡಿ ಕಾಂಪೌಂಡ್ ನಿರ್ಮಿಸಲಿದ್ದೇವೆ. ಕೇಂದ್ರ ಸರ್ಕಾರ ಶೇ. 50, ರಾಜ್ಯ ಸರ್ಕಾರ ಶೇ. 40 ಹಾಗೂ ಪಟ್ಟಣ ಪಂಚಾಯಿತಿ ಶೇ.10 ಹಣ ಭರಿಸಲಿದೆ.
ರಹಮತ್ ಉಲ್ಲಾ ಅಸಾದಿ
ಪಪಂ ಅಧ್ಯಕ್ಷ
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸಂಬಂಧಿಸಿ 5 ಕೋಟಿ ರೂ. ಕ್ರಿಯಾ ಯೋಜನೆ ತಯಾರಾಗಿದ್ದು, ಸದ್ಯದಲ್ಲೇ ಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇವೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲ ಪಕ್ಷದ ನಾಯಕರು ಬೆಂಬಲ ನೀಡಿದ್ದಾರೆ. ಪಪಂನ ಎಲ್ಲ ಸದಸ್ಯರ ಬೆಂಬಲದಿಂದ ಪಟ್ಟಣ ಸುಂದರವಾಗಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರಾಘವೇಂದ್ರ ಶೆಟ್ಟಿ, ನಮ್ರತ್, ಶಬ್ನಂ, ಮಂಜುಳಾ ನಾಗೇಂದ್ರ, ಮುಖ್ಯಾಧಿಕಾರಿ ನಾಗರಾಜ್, ಎಇಇ ರವಿಕುಮಾರ್ ಇತರರಿದ್ದರು.