ಸಾಗರದ ಶ್ರೀಧರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಟಿಯು ರ‌್ಯಾಂಕ್ ವಿದ್ಯಾರ್ಥಿನಿ ಆರ್.ವಂದನಾ ಅವರನ್ನು ಸನ್ಮಾನಿಸಲಾಯಿತು. ಎಲ್.ಚಂದ್ರಪ್ಪ, ಮಂಜುಳಾ, ಕಮಲಾ ಇತರರಿದ್ದರು. 
ನ್ಯೂಸ್

ಬಡತನದ ಕಾರಣಕ್ಕೆ ಶಿಕ್ಷಣ ನಿಲ್ಲಿಸಬೇಡಿ

ಸಾಗರ: ಶಿಕ್ಷಣಕ್ಕೆ ಬಡತನ ಅಡ್ಡಿಯಾಗುವುದಿಲ್ಲ. ಪ್ರತಿಭೆ ಇದ್ದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ನಗರಸಭೆ ಸದಸ್ಯ ಎಲ್.ಚಂದ್ರಪ್ಪ ಹೇಳಿದರು.

ಶ್ರೀಧರ ನಗರದಲ್ಲಿ ಚಿರಂತನ ಮಹಿಳಾ ಒಕ್ಕೂಟ, ವಿನಾಯಕ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಿಂದ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದ ಆರ್.ವಂದನಾ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕುಟುಂಬದ ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಅನೇಕ ಪ್ರತಿಭಾವಂತರು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ. ಆದರೆ ವಂದನಾ ಅವರ ಪಾಲಕರು ಕೂಲಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿನಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದಿದ್ದರು. ಇದೀಗ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಬಂದಿರುವುದು ಮಾದರಿ ಎಂದು ತಿಳಿಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ಕ್ಷೇತ್ರಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ವಂದನಾ, ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಲು ಪಾಲಕರ ಪ್ರೋತ್ಸಾಹ ಹಾಗೂ ಅಧ್ಯಾಪಕ ವರ್ಗದ ಮಾರ್ಗದರ್ಶನ ಕಾರಣ. ಉನ್ನತ ಶಿಕ್ಷಣಕ್ಕೆ ಬೇಕಾದ ಆರ್ಥಿಕ ಸಹಕಾರ ಬ್ಯಾಂಕ್ ನೀಡುತ್ತದೆ. ಬಡತನ ಕಾರಣಕ್ಕೆ ಶಿಕ್ಷಣ ನಿಲ್ಲಿಸಬೇಡಿ ಎಂದರು.

ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಕಮಲಾ, ನಾಗರಾಜ್, ಜನಾರ್ದನ ಪೂಜಾರಿ, ಮಹಾದೇವ, ಮಂಜುನಾಥ್, ಚರಣ್, ಉಷಾ ಇತರರಿದ್ದರು.