ರಿಪ್ಪನ್‌ಪೇಟೆ: ನಮ್ಮ ಸುತ್ತಮುತ್ತಲಿನ ಪರಿಸರ ವಿಸ್ಮಯ ಮತ್ತು ಸುಂದರವಾಗಿರಲು ಹಾವುಗಳು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ರೀತನ್ ಬೋಪಣ್ಣ ಹೇಳಿದರು.
ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಹಾವುಗಳ ಸಂರಕ್ಷಣೆ ಮತ್ತು ಅವುಗಳ ಕಡಿತ ನಿರ್ವಹಣೆ, ಕಾಳಿಂಗ ಸರ್ಪಗಳ ಆವಾಸ, ಸಂತಾನೋತ್ಪತ್ತಿ, ಸಂರಕ್ಷಣೆ ಹಾಗೂ ಸಂಶೋಧನಾ ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಹಾವುಗಳ ಬಗ್ಗೆ ಮೌಢ್ಯತೆ ಹೊಂದದೆ ಜಾಗ್ರತೆ ವಹಿಸಬೇಕು. ಹಾವುಗಳು ಕೊಲ್ಲಬಾರದು ಎಂದು ತಿಳಿಸಿದರು.
ದೇಶದಲ್ಲಿ 350ಕ್ಕೂ ಅಧಿಕ ಜಾತಿ ಹಾವುಗಳಿದ್ದು, ನಾಗರಹಾವು, ಕಟ್ಟುಹಾವು, ಕೊಳಕು ಮಂಡಲ, ಗರಗಸ ಮಂಡಲದಂತಹ ಕೇವಲ 4 ಜಾತಿಯ ಹಾವುಗಳು ಮಾತ್ರ ವಿಷಕಾರಿ. ಉಳಿದವುಗಳು ನಿರುಪದ್ರವಿಗಳು. ಹಾವಿನ ಕಡಿತದಿಂದ ದೇಶದಲ್ಲಿ ಒಂದು ವರ್ಷಕ್ಕೆ 60 ಸಾವಿರ ಜನರು ಅಸುನೀಗುತ್ತಿದ್ದಾರೆ. ಎಲ್ಲ ಹಾವುಗಳೂ ವಿಷಕಾರಿಗಳಲ್ಲ. ಆದರೆ ಸೂಕ್ತ ಮಾಹಿತಿ ಇಲ್ಲದೆ ಕಂಡ ಹಾವುಗಳನ್ನೆಲ್ಲ ವಿಷಪೂರಿತ ಎಂದು ಕೊಲ್ಲುತ್ತಿರುವುದರಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದರು.
ಹಾವು ಕಡಿತದ ಔಷಧ ತಯಾರಿಸಲು ನಾಲ್ಕು ಜಾತಿ ಹಾವುಗಳ ವಿಷವೇ ಬೇಕಾಗುತ್ತದೆ. ದಿನೇದಿನೆ ಮನುಷ್ಯನ ಕ್ರೌರ್ಯದಿಂದ ಹಾವುಗಳ ಸಂತತಿ ಕಡಿಮೆಯಾಗುತ್ತಿರುವ ಕಾರಣ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತದ ಅಗತ್ಯಕ್ಕೆ ಬೇಕಾದ ಔಷಧ ಕೊರತೆ ಎದುರಿಸುತ್ತಿದ್ದೇವೆ.
ರೀತನ್ ಬೋಪಣ್ಣ
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ
ಉರಗ ಸಂರಕ್ಷಕ ನಾಗರಾಜ್ ಬೆಳ್ಳೂರು ಮಾತನಾಡಿ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕಂಡುಬರುವ ಕಾಳಿಂಗ ಸರ್ಪ ವಿಷಕಾರಿಯಾಗಿದ್ದರೂ ಮನುಷ್ಯನಿಗೆ ಕಡಿದಿರುವುದು ವಿರಳ. ಪುಕ್ಕಲು ಸ್ವಭಾವವನ್ನು ಹೊಂದಿರುವ ಕಾಳಿಂಗ ವಂಶಾಭಿವೃದ್ಧಿ ಕಾಲಘಟ್ಟದಲ್ಲಿ ಹೆಣ್ಣು ಹಾವು ಶ್ರವಿಸುವ ವಾಸನೆ ಗ್ರಹಿಸಿಕೊಂಡು ಬರುವ ಗಂಡು ಹಾವುಗಳು ಒಂದಕ್ಕಿಂತ ಹೆಚ್ಚು ಕಾಣಿಸಿಕೊಳ್ಳಬಹುದು. ಜನರು ಆತಂಕಪಡುವ ಅಗತ್ಯವಿಲ್ಲ. ಕೆಲ ಸಮಯದ ನಂತರ ಅವು ವಾಪಸ್ ತೆರಳುತ್ತವೆ ಎಂದು ಹೇಳಿದರು.
ಮನೆ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೊಲಗದ್ದೆಗಳಲ್ಲಿ ಕೆಲಸ ನಿರ್ವಹಿಸುವಾಗ ಕಾಲು ಮತ್ತು ಕೈಗಳಿಗೆ ರಕ್ಷಣೆ ಮಾಡಿಕೊಂಡಲ್ಲಿ ಹಾವು ಕಡಿತದಿಂದ ಪಾರಾಗಬಹುದು. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕಾಳಿಂಗ ಸರ್ಪದ ಬಗ್ಗೆ ವಿವಿಧ ರೀತಿ ವ್ಯಾಖ್ಯಾನ ಕೊಡಲಾಗುತ್ತದೆ. ಸರಿಸೃಪಗಳ ಮೇಲೆ ಕೂದಲು ಬೆಳೆಯುವುದಿಲ್ಲ. ಜುಟ್ಟಿ ಕಾಳಿಂಗ, ಜಡೆ ಕಾಳಿಂಗಗಳೆಂಬುದೆಲ್ಲ ಸುಳ್ಳು, ಹಾವುಗಳಿಗೆ ಹಿಂಸೆ ಕೊಡುವುದನ್ನು ಬಿಟ್ಟು ಬದುಕಲು ಅವಕಾಶ ಕೊಡಿ ಎಂದು ತಿಳಿಸಿದರು. ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಕ್ಷೇತ್ರ ನಿರ್ದೇಶಕ ಅಜಯ್‌ಗಿರಿ, ಐಶ್ವರ್ಯಾ, ಮುಖ್ಯಶಿಕ್ಷಕ ಸೋಮಶೇಖರ ಬಂಡಿ ಇತರರಿದ್ದರು.