ಸೊರಬ: ಎಲ್ಲ ಇಲಾಖೆಗಳ ದಾಖಲಾತಿಗಳನ್ನು ಡಿಜಿಟಲೀಕರಣ ಮಾಡುವುದರಿಂದ ಅಧಿಕಾರಿಗಳ ಮೇಲಿನ ಒತ್ತಡ ಹಾಗೂ ಜನಸಾಮಾನ್ಯರ ಅಲೆದಾಟ ತಪ್ಪಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ-ನಿಮ್ಮ ಭೂ ದಾಖಲೆಗಳ ಇ-ಖಜಾನೆ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಭೂ ದಾಖಲೆಗಳು ಸೇರಿ ಇತರ ಕೆಲಸಗಳು ಸುಲಭವಾಗಲು ಕಂದಾಯ ಇಲಾಖೆ ಡಿಜಿಟಲೀಕರಣ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಅನೇಕ ಶಾಲಾ ಕಾಲೇಜು ನಿರ್ಮಾಣಕ್ಕೆ ಹಿರಿಯರು ಭೂದಾನ ಮಾಡಿ ಜೀವನದಲ್ಲಿ ಸಾರ್ಥಕ್ಯ ಪಡೆದಿದ್ದಾರೆ. ಕೆಲವೆಡೆ ಭೂಮಿ ಶಾಲಾ ಹೆಸರಿಗೆ ನೋಂದಣಿಯಾಗಿಲ್ಲ. ಇದನ್ನೇ ಮುಂದಿಟ್ಟುಕೊಂಡು ದಾನಿಗಳ ಕುಟುಂಬದವರು ಭೂಮಿ ತಮ್ಮದಾಗಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಅಂತಹ ಭೂಮಿಗಳನ್ನು ಶಾಲೆ, ಕಾಲೇಜುಗಳಿಗೆ ಉಳಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಲಿದೆ. ಕಾಯ್ದೆ ತಿದ್ದುಪಡಿಗೆ ವಿಧಾನ ಮಂಡಲದಲ್ಲಿ ಚರ್ಚಿಸಲಾಗುವುದು. ಶಾಲಾ ಜಮೀನು ಒತ್ತುವರಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್, ತಾಲೂಕಿನಲ್ಲಿ ಡಿಸೆಂಬರ್‌ನಿಂದ ಸರ್ವೇ ಮತ್ತು ನೋಂದಣಿ ಇಲಾಖೆಯ ಭೂದಾಖಲೆಗಳ ಡಿಜಿಟಲೀಕರಣ ಆರಂಭವಾಗಿದೆ. 12.6 ಲಕ್ಷ ಫೈಲ್‌ಗಳನ್ನು ಹೋಬಳಿವಾರು ಎ, ಬಿ ಎಂದು ವರ್ಗೀಕರಿಸಿ ಆರು ತಿಂಗಳಲ್ಲಿ ಡಿಜಿಟಲೀಕರಣ ಮಾಡುವ ಉದ್ದೇಶವಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್, ತಹಸಿಲ್ದಾರ್ ಮಂಜುಳಾ ಡಿ.ಹೆಗಡಾಳ್, ಇಒ ಡಾ. ಎನ್.ಆರ್.ಪ್ರದೀಪ್ ಕುಮಾರ್, ಗ್ರೇಡ್2 ಶಿರಸ್ತೇದಾರ್ ನಾಗರಾಜ್, ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಬಿಇಒ ಆರ್.ಪುಷ್ಪಾ, ಶಿವಪ್ರಸಾದ್ ಇತರರಿದ್ದರು.