ಸಾಗರ: ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಗ್ರಾಮ ರಾಜ್ಯದ ಪರಿಕಲ್ಪನೆ ನೀಡಿದವರು ಮಹಾತ್ಮ ಗಾಂಧೀಜಿ. ಪಂಚಾಯಿತಿ ಅಭಿವೃದ್ಧಿಗೆ ಗ್ರಾಪಂ ಸದಸ್ಯರು ಒಟ್ಟಾಗಿ ಶ್ರಮಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲೂಕಿನ ಪಡವಗೋಡು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಶೆಡ್ ಮತ್ತು ಎಂಎಲ್‌ಸಿ ಡಿ.ಎಸ್.ಅರುಣ್ ಅವರ ಅನುದಾನದಲ್ಲಿ ಗ್ರಾಪಂನ ನವೀಕೃತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರು ಗ್ರಾಮಸಭೆಗೆ ಹಾಜರಾಗಿ ಸರ್ಕಾರದಿಂದ ಬಂದ ಅನುದಾನದ ಮಾಹಿತಿ ಪಡೆಯಬೇಕು. ಗ್ರಾಮಸಭೆಗೆ ಹಾಜರಾಗದೆ ಸೌಲಭ್ಯ ಸಿಗುತ್ತಿಲ್ಲ ಎಂದು ನನ್ನ ಬಳಿ ದೂರು ತರಬೇಡಿ. ಗ್ರಾಮ ಸಭೆಗಳಿಗೆ ಅಧಿಕಾರಿಗಳು ಕಡಾಯವಾಗಿ ಹಾಜರಾಗಬೇಕು. ಸರ್ಕಾರದ ಅನುದಾನ ಸದ್ವಿನಿಯೋಗ ಆಗಬೇಕಾದರೆ ಗ್ರಾಪಂಗಳು ಸಶಕ್ತವಾಗಬೇಕು. ರಾಜ್ಯ ಸರ್ಕಾರ ಮಹಿಳಾ ಗ್ರಾಮ ಸಭೆ ನಡೆಸುವ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ ಎಂದು ತಿಳಿಸಿದರು.
ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಆಗದಂತೆ ಅನುದಾನ ಸಹ ವಿಕೇಂದ್ರೀಕರಣ ಆಗಬೇಕು. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಿದಾಗ ಉತ್ತಮ ಅಭಿವೃದ್ಧಿ ನಡೆಸಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಬಯಲುಮುಕ್ತ ಶೌಚಗೃಹ ಕರೆ ಕೊಟ್ಟ ನಂತರ ಜನರು ಜಾಗೃತರಾಗಿದ್ದಾರೆ. ಇದೀಗ ದೇಶದಲ್ಲಿ 7.80 ಕೋಟಿ ಶೌಚಗೃಹ ನಿರ್ಮಾಣವಾಗಿದೆ. ಸ್ವಚ್ಛ ಭಾರತ್ ಅಭಿಯಾನದಡಿ ದೇಶದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.
ಭೂಮಿಗೆ ಬಂಗಾರದ ಬೆಲೆ ಬಂದಿರುವುದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಒತ್ತುವರಿ ಜಾಸ್ತಿಯಾಗುತ್ತ್ತಿದೆ. ನಮ್ಮ ಗ್ರಾಮ ಠಾಣಾ, ಸ್ಮಶಾನ ಭೂಮಿಯನ್ನು ಉಳಿಸಿಕೊಳ್ಳುವ ಜತೆಗೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಕಾರ್ಯಗಳಿಗೆ ಭೂಮಿ ಕಾಯ್ದಿರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇದೆ. ಡಿ.ಎಸ್.ಅರುಣ್ ವಿಧಾನ ಪರಿಷತ್ ಸದಸ್ಯ
ಗ್ರಾಪಂ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಶೋಭಾ ಹರೀಶ್, ಪ್ರಮುಖರಾದ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಸ್ಮಿತಾ ದಯಾನಂದ್, ಸುಶೀಲಮ್ಮ, ವೀರೇಂದ್ರ, ಶಾರದಾ, ನಿರ್ಮಲಾ, ಸಚಿನ್, ಶ್ರೀನಿವಾಸ್, ಗೀತಮ್ಮ, ಗುರುಕೃಷ್ಣ ಶೆಣೈ, ಗಾಯತ್ರಿ, ಉಲ್ಲಾಸ್, ಹರೀಶ್, ರಾಘವೇಂದ್ರಕುಮಾರ್ ಇತರರಿದ್ದರು.