ನ್ಯೂಸ್

ಶಿವಮೊಗ್ಗದಲ್ಲಿ ದತ್ತ ನಾಮ ಸ್ಮರಣೆಯ ಸಂಭ್ರಮ

ಶಿವಮೊಗ್ಗ: ದತ್ತ ಜಯಂತಿ ಅಂಗವಾಗಿ ವಿನಾಯಕ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ಭಕ್ತರು ದತ್ತಾತ್ರೇಯ ದರ್ಶನ ಪಡೆದರು. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ದತ್ತಪಾದುಕೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರು ದತ್ತಾತ್ರೇಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ದತ್ತ ಮಂದಿರದಲ್ಲೂ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಸಹ್ಯಾದ್ರಿ ಕಾಲೇಜು ಹಿಂಭಾಗದಲ್ಲಿರುವ ದತ್ತಾಶ್ರಮದಲ್ಲಿ ದತ್ತ ಜಯಂತಿ ಅಂಗವಾಗಿ ಪರಮಹಂಸ ಸದ್ಗುರು ಶ್ರೀಸತ್ ಉಪಾಸಿ ಅವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರುವಾರ ಸಂಜೆ ಪರಮಹಂಸ ಸದ್ಗುರು ಶ್ರೀಸತ್‌ಉಪಾಸಿ ಅವರನ್ನು ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

ನಂತರ ಹೋಮ, ಪ್ರಸಾದ, ಸತ್ಸಂಗ ಮತ್ತು ಭಜನೆ ನಡೆಯಿತು. ಡಿ.9ರ ಬೆಳಗ್ಗೆ 11ಕ್ಕೆ ಅಭಿಷೇಕ, ಪೂಜೆ, ಸತ್ಸಂಗ ಹಾಗೂ ಮಹಾಪ್ರಸಾದ ವಿನಿಯೋಗ ನೆರವೇರಲಿದೆ. ಮಧ್ಯಾಹ್ನ 3ಕ್ಕೆ ರಥೋತ್ಸವ, ನಂತರ ಪ್ರಸಾದ, ಸತ್ಸಂಗ ಮತ್ತು ಅಖಂಡ ಭಜನೆ ನಡೆಯಲಿದೆ.