ಭದ್ರಾವತಿ: ಶಿಕ್ಷಕರು ವೃತ್ತಿಯನ್ನು ಗೌರವಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ನಗರದಲ್ಲಿ ಶಿಕ್ಷಣ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಮಾದರಿಯಾಗಿದ್ದಾರೆ. ತಾಲೂಕಿನ ಎಲ್ಲ ಶಿಕ್ಷಕರು ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಶಿಕ್ಷಕರು ಶಾಲೆಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಹಕಾರ ಮುಖ್ಯವಾಗುತ್ತದೆ. ಶಿಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಗುರುಭವನ ಕಟ್ಟಡಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂ. ಅನುದಾನ ನೀಡುತ್ತೇನೆ. ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಇಂದು ಹಲವು ಕಾರಣಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳು ಹಾಗೂ ಪಾಲಕರನ್ನು ಪ್ರೇರೇಪಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ತಾಲೂಕಿನ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯ ಬಿ.ಕೆ.ಮೋಹನ್, ಬಸವರಾಜ್ ಆನೆಕೊಪ್ಪ, ಪೌರಾಯುಕ್ತ ಕೆ.ಎನ್.ಹೇಮಂತ್, ಉಡುಪಿ ಟಿಎಂಎ ಪೈ ಶಿಕ್ಷಣ ಸಂಸ್ಥೆ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್, ಬಿಇಒ ಎ.ಕೆ.ನಾಗೇಂದ್ರಪ್ಪ, ಬಿ.ಎಸ್.ಗಣೇಶ್, ಪಂಚಾಕ್ಷರಪ್ಪ, ಪೃಥ್ವಿರಾಜ್, ಸಿ.ಡಿ.ಮಂಜುನಾಥ್, ಜಿ.ಕೊಟ್ರಪ್ಪ ಇತರರಿದ್ದರು.