ಸಾಗರ: ಕಾಯಕದ ಜತೆಗೆ ಸಮಾಜಮುಖಿ ಸೇವೆ ಸಲ್ಲಿಸುವುದು ಶ್ಲಾಘನೀಯ. ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ನಗರಸಭೆ ಬದ್ಧವಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.
ನಗರದಲ್ಲಿ ತಾಲೂಕು ಕಾರು ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಸಾಗರದಲ್ಲಿ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರಿಗೆ ನಗರಸಭೆಯಿಂದ ಸಹಕಾರ ನೀಡುತ್ತಿದ್ದೇವೆ. ಕಾನೂನು ಪಾಲನೆ, ಸುರಕ್ಷಿತ ವಾಹನ ಚಾಲನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಮಾತನಾಡಿ, ಕಾರು ಚಾಲಕರು ಮತ್ತು ಮಾಲೀಕರು ಜನರಿಗೆ ಉತ್ತಮ ಸೇವೆ ನೀಡಿದಾಗ ನಿಮ್ಮನ್ನು ಸದಾ ಸ್ಮರಿಸುತ್ತಾರೆ. ವಾಹನ ಮತ್ತು ಚಾಲಕರಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಗಿರೀಶ್ ಕೋವಿ ಮಾತನಾಡಿ, ಸದಸ್ಯರ ಹಿತ ಕಾಯುವ ಜತೆಗೆ ಸಮಾಜಮುಖಿ ಕೆಲಸವನ್ನು ಸಂಘಟನೆ ನಡೆಸುತ್ತಿದೆ. ಈಗಾಗಲೆ ಕಾರು ನಿಲ್ಲಲು ಸುಸಜ್ಜಿತ ನಿಲ್ದಾಣ ನಿರ್ಮಿಸಲಾಗಿದೆ. ಸಂಘದ ಚಟುವಟಿಕೆಗೆ ಕಾರ್ಯಾಲಯ ಅಗತ್ಯವಿದ್ದು, ನಗರಸಭೆಯಿಂದ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಎಆರ್‌ಟಿಒ ವೀರೇಶ್, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯ ಗಣಪತಿ ಮಂಡಗಳಲೆ, ಸಂಘದ ಉಪಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಫ್ರಾನ್ಸಿಸ್ ಡಿಕಾಸ್ಟಾ, ಮುರಳಿ, ಕೃಷ್ಣಮೂರ್ತಿ, ವಿಜಯೇಂದ್ರ, ಪ್ರವೀಣ್ ಇತರರಿದ್ದರು.