ತಾರಾಮೂರ್ತಿ 
ನ್ಯೂಸ್

28ಕ್ಕೆ ಚನ್ನಮ್ಮಾಜಿ ನಾಗರಿಕ ವೇದಿಕೆಗೆ ಚಾಲನೆ

ಸಾಗರ: ನಗರದ ಕೆಳದಿ ರಸ್ತೆಯ ರಾಣಿ ಚನ್ನಮ್ಮ ವೃತ್ತದಲ್ಲಿ ಡಿ.28ರಂದು ಸಂಜೆ 4.30ಕ್ಕೆ ಕೆಳದಿ ರಾಣಿ ಚನ್ನಮ್ಮಾಜಿ ನಾಗರಿಕ ವೇದಿಕೆ ಉದ್ಘಾಟನೆಯಾಗಲಿದೆ ಎಂದು ವೇದಿಕೆ ಸಂಚಾಲಕ ತಾರಾಮೂರ್ತಿ ಹೇಳಿದರು.

ನಗರಸಭೆ ವ್ಯಾಪ್ತಿಯ 1ರಿಂದ 9ನೇ ವಾರ್ಡ್ ವ್ಯಾಪ್ತಿ ಒಳಗೊಂಡು ವೇದಿಕೆ ಕಾರ್ಯ ನಿರ್ವಹಿಸಲಿದೆ. ಸೊರಬ ರಸ್ತೆ ರೈಲ್ವೆಗೇಟ್ ಮೇಲ್ಭಾಗದ 9 ವಾರ್ಡ್‌ಗಳು ನಾಗರಿಕ ಸೌಲಭ್ಯದಿಂದ ವಂಚಿತವಾಗಿವೆ. ರೈಲ್ವೆಗೇಟ್ ಪದೇಪದೆ ಹಾಕುವುದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಭಾಗದಲ್ಲಿ ಫ್ಲೈಓವರ್ ಮಾಡಬೇಕು ಎನ್ನುವುದು ಅನೇಕ ವರ್ಷದ ಬೇಡಿಕೆಯಾಗಿದೆ. ಸಂಘಟನಾತ್ಮಕ ಹೋರಾಟ ಮಾಡುವ ಉದ್ದೇಶದಿಂದ ವೇದಿಕೆ ನಿರ್ಮಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

28ರಂದು ವೇದಿಕೆ ಉದ್ಘಾಟನೆ ಜತೆಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆ, ಕಾಗೋಡು ತಿಮ್ಮಪ್ಪ ಸೇರಿ ಹಿರಿಯರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸುವರು. ಕಲಾವಿದರಿಂದ ಸಂಗೀತ ಸಂಜೆ, ಜಗ್ಗಪ್ಪ ಮತ್ತು ವಾಣಿ ಗೌಡ ಅವರಿಂದ ಹಾಸ್ಯಸಂಜೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಗರಸಭಾ ಸದಸ್ಯ ಎಲ್.ಚಂದ್ರಪ್ಪ ಮಾತನಾಡಿ, ಕೆಳದಿ ರಾಣಿ ಚನ್ನಮ್ಮ ಹೆಸರು ಜನಮಾನಸದಿಂದ ದೂರವಾಗುತ್ತಿದೆ. ರಾಣಿ ಚನ್ನಮ್ಮ ಎಂದರೆ ಎಲ್ಲರೂ ಕಿತ್ತೂರು ಕಡೆ ನೋಡುತ್ತಾರೆ. ಆದರೆ 25ವರ್ಷಕ್ಕೂ ಹೆಚ್ಚು ಕಾಲ ರಾಜ್ಯಾಡಳಿತ ನಡೆಸಿದ ಕೆಳದಿ ರಾಣಿ ಚನ್ನಮ್ಮಾಜಿ ಇತಿಹಾಸ ಮೂಲೆಗುಂಪಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸದ ಮೇಲೆ ಬೆಳಕು ಚೆಲ್ಲಲು ವೇದಿಕೆ ಮೂಲಕ ಪ್ರಯತ್ನಿಸಲಾಗುತ್ತಿದೆ. ಕೆಳದಿ ವೃತ್ತದಲ್ಲಿ ರಾಣಿ ಚನ್ನಮ್ಮಾಜಿ ಬೃಹತ್ ಪುತ್ಥಳಿ, ಮಹಾದ್ವಾರ ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುತ್ತದೆ. ಕೆಳದಿ ರಾಣಿ ಚನ್ನಮ್ಮಾಜಿ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ನಾರಾಯಣಪ್ಪ, ಪ್ರೇಮ್‌ಸಿಂಗ್, ರವೀಂದ್ರ ಸಾಗರ್, ಯಶವಂತ ಪಣಿ, ಅನ್ವರ್ ಬಾಷಾ, ರಾಜೇಂದ್ರ ಸಿಂಗ್, ಶಿವಕುಮಾರ್, ಕೇಶವ, ಲಕ್ಷ್ಮಣ ಸಾಗರ್, ನಾಗರಾಜ್, ರವೀಂದ್ರ, ಮಂಜುನಾಥ ಇತರರು ಸುದ್ದಿಗೋಷ್ಠಿಯಲ್ಲಿದ್ದರು.