ನ್ಯೂಸ್

ವಿರಾಟಪುರ ವಿರಾಗಿ ವೀಕ್ಷಿಸಿದ ಬಿವೈಆರ್-ಮಠಾಧೀಶರು

ಶಿವಮೊಗ್ಗ: ಶ್ರೀ ಹಾನಗಲ್ ಕುಮಾರ ಶಿವಯೋಗಿ ಸ್ವಾಮೀಜಿ ಅವರ ಜೀವನಾಧಾರಿತ ಚಲನಚಿತ್ರ ವಿರಾಟಪುರ ವಿರಾಗಿ ಜ.13ರಂದು ಬಿಡುಗಡೆಗೊಳ್ಳಲಿದ್ದು, ಗುರುವಾರ ನಗರದ ಚಿತ್ರಮಂದಿರವೊಂದರಲ್ಲಿ ವಿರಾಟಪುರ ವಿರಾಗಿಯ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.

ಪ್ರಿಮೀಯರ್ ಶೋನಲ್ಲಿ ನಿರೀಕ್ಷೆಗೂ ಮೀರಿ ಶಿವಯೋಗಿ ಸ್ವಾಮೀಜಿ ಭಕ್ತರು, ವೀರಶೈವ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. 500ಕ್ಕೂ ಹೆಚ್ಚು ಮಂದಿ ಸಿನಿಮಾ ವೀಕ್ಷಿಸಿ ಸಮಾಜಕ್ಕೆ ಶ್ರೀಗಳ ಕೊಡುಗೆಯನ್ನು ಕೊಂಡಾಡಿದರು.

ಸಿನಿಮಾ ವೀಕ್ಷಣೆಗೂ ಮುನ್ನ ಶಿವಯೋಗಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಡಾ.ಬಸವಮರುಳಸಿದ್ದ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕ ನಾಯ್ಕ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ನಗರ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಅನಿತಾ ರವಿಶಂಕರ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೇಕೆರೆ, ಪ್ರಮುಖರಾದ ಮುರುಗೇಶ್ ಕುಬ್ಸದ್, ಮಹೇಶಮೂರ್ತಿ, ತಾರಾನಾಥ್, ಉಮಾಶಂಕರ್, ಶಿವಯೋಗಿ ಹಂಚಿನಮನೆ ಮುಂತಾದವರು ಸಿನಿಮಾ ವೀಕ್ಷಿಸಿದರು.