ಆನಂದಪುರ: ವಿಶ್ವಗುರು ಬಸವಣ್ಣ ಅವರು ನಡೆ-ನುಡಿಗಳ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದರು ಎಂದು ಭದ್ರಾವತಿ ಸಂಚಿ ಹೊನ್ನಮ್ಮ ಪಿಯು ಕಾಲೇಜಿನ ಉಪನ್ಯಾಸಕ ಬಿ.ಚನ್ನಯ್ಯ ಹೇಳಿದರು.
ಸಮೀಪದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಜಯಂತಿ ಮತ್ತು 590ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜಾತಿ ಮತಗಳ ಭೇದದಿಂದ ಸಮಾಜ ಅತ್ಯಂತ ದುಸ್ಥಿತಿಯಲ್ಲಿತ್ತು. ಬಸವಣ್ಣನವರು ಮನುಷ್ಯರೆಲ್ಲ ಒಂದೇ ಎಂಬ ಸಂದೇಶ ಸಾರಿದರು. ಜಾತಿಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಿ ಸಾಮರಸ್ಯ ಸಾಧಿಸಿದರು. ಮೌಢ್ಯವನ್ನು ಖಂಡಿಸಿ ಜೀವನ ವಿಧಾನದಲ್ಲಿ ಬದಲಾವಣೆ ಮಾರ್ಗ ತೋರಿಸಿದರು ಎಂದು ತಿಳಿಸಿದರು.
ಶಿಕಾರಿಪುರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಮಾತನಾಡಿ, ವಚನ ಸಾಹಿತ್ಯವು ಪ್ರಪಂಚದ ವಿಶಿಷ್ಟ ಸಾಹಿತ್ಯ ಪ್ರಕಾರ. ಎಲ್ಲ ರೀತಿ ಕಾಯಕ ಮಾಡುವವರು ವಚನ ರಚನೆ ಮಾಡಿರುವುದು ಗಮನಾರ್ಹ ಎಂದರು.
ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣ ಅವರು ಗೌರವಯುತ ಬದುಕು ಮನುಷ್ಯರ ಹಕ್ಕು ಎಂದು ಸಾರಿದರು. ವಚನಗಳ ಮೂಲಕ ಇಡೀ ಸಮಾಜದಲ್ಲಿ ಅತ್ಯಧಿಕ ಬದಲಾವಣೆ ಉಂಟಾಗಿರುವುದು ಕೌತುಕದ ವಿಷಯ ಎಂದರು.