ಸೊರಬ: ಪಟ್ಟಣದ ನಾಮದೇವ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದಲ್ಲಿ ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.
ಆಷಾಢ ಏಕಾದಶಿ ಆಚರಣೆ ವೈಕುಂಠ ಏಕಾದಶಿ ಆಚರಣೆಯಷ್ಟೇ ಮಹತ್ವ ಪಡೆದಿದೆ. ಈ ದಿನ ಉಪವಾಸ ಕೈಗೊಂಡು ಹರಿನಾಮ ಸ್ಮರಣೆ ಮಾಡಿದರೆ ಪುಣ್ಯ ಫಲ ದೊರಕುತ್ತದೆ ಎಂಬ ನಂಬಿಕೆ ಭಕ್ತರದು. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪಾರಾಯಣ, ಭಜನೆ ಹಾಗೂ ಸಂಕೀರ್ತನೆ ಜರುಗಿದವು. ಶ್ರೀದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ನಡೆಯಿತು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಏಕಾದಶಿ ನಿಮಿತ್ತ ಭಕ್ತರು ವಿಠ್ಠಲ ರಾಧಾ ರಖುಮಾಯಿ ದೇವರ ಭಜನೆಗಳನ್ನು ಹಾಡಿದರು. ಉಪವಾಸ ಕೈಗೊಂಡಿದ್ದ ಭಕ್ತರು ದೇವರ ನಾಮ ಸ್ಮರಣೆ ಮೂಲಕ ವಿಶೇಷ ದಿನ ಆಚರಿಸಿದರು. ಪಟ್ಟಣ ಸೇರಿ ತಾಲೂಕಿನ ವಿವಿಧೆಡೆಯಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ದೇವಾಲಯದಲ್ಲಿ ಭಜನೆ ಹಾಗೂ ಶ್ರೀಮತಿ ಅವರಿಂದ ಕೀರ್ತನೆ ನಡೆಯಿತು.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಮಾರುತಿ ಭೈರೇಕೊಪ್ಪ, ಕಾರ್ಯದರ್ಶಿ ಕೇಶವಮೂರ್ತಿ ಪೇಟ್ಕರ್, ಉಪಾಧ್ಯಕ್ಷ ಅನಿಲ್‌ಕುಮಾರ್ ಬಾಂಬೂರೆ, ಅರುಣ್‌ಕುಮಾರ್, ಪ್ರಭಾಕರ್ ಬಾಂಬೂರೆ, ಗುರುನಾಥ ಬೆನ್ನೂರು, ಸತೀಶ್, ಗೀರಿಶ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಇದ್ದರು.