ಶಿವಮೊಗ್ಗ: ಸ್ತ್ರೀಯರಲ್ಲಿ ಸ್ವಾವಲಂಬನೆಯ ಜಾಗೃತಿ ಮೂಡಿಸುವ ಜತೆಗೆ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಯುತ್ತಿರುವುದು ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ ಹಾಗೂ ಶೇಷಾದ್ರಿಪುರಂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ವಲಯ ಮಟ್ಟದ ಸಾಧನಾ ಸಮಾವೇಶವವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬನೆ ಸಾಧಿಸುವ ಜತೆಗೆ ಅನೇಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೆಳವಣಿಗೆ ಹೊಂದಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಪಡೆದ ಸಾಲವನ್ನು ಸದುಪಯೋಗ ಮಾಡಿಕೊಂಡರೆ ಯಶಸ್ವಿ ಉದ್ಯಮಿಗಳಾಗಬಹುದು ಎಂಬುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರೇ ನಿದರ್ಶನ. ಸ್ವಾವಲಂಬಿ ಮಹಿಳೆಯರು ಈ ದೇಶದ ಆಸ್ತಿ. ಸಂಸಾರದ ಜವಾಬ್ದಾರಿಯನ್ನೂ ಹೊತ್ತಿರುವ ಮಹಿಳೆಯರು ಆರ್ಥಿಕವಾಗಿಯೂ ಸದೃಢರಾಗುತ್ತಿದ್ದಾರೆ ಎಂದು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು ಎಂಬುದನ್ನು ಮನಗಂಡು 40 ವರ್ಷಗಳ ಹಿಂದೆಯೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಈ ಯೋಜನೆ ಪ್ರಾರಂಭಿಸಿದ್ದು ವಿಶೇಷ. ಇದರ ಪರಿಣಾಮ ಲಕ್ಷಾಂತರ ಮಹಿಳೆಯರು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.
ನಗರ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಕಿರಣ ದೇಸಾಯಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.