ಹೊಸನಗರ: ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಸಮಸ್ಯೆಗಳು ಉಂಟಾಗಿದ್ದು, ಮಾಸ್ತಿಕಟ್ಟೆ-ಯಡೂರು ಮಧ್ಯೆ ಎರಡು ಬೃಹತ್ ಲಾರಿಗಳು ಗುಂಡಿಯಲ್ಲಿ ಸಿಲುಕಿ ಸಂಚಾರ ಬಂದ್ ಆಗಿದೆ.
ವಾಹನಗಳು ಪರ್ಯಾಯವಾಗಿ ಮಾಸ್ತಿಕಟ್ಟೆ, ಕಾನುಗೋಡು ಮಾರ್ಗವಾಗಿ ತೀರ್ಥಹಳ್ಳಿಗೆ ಸಂಚರಿಸುತ್ತಿವೆ. ನಾಗೋಡಿ ಕೊಲ್ಲೂರು ಘಾಟ್ ರಸ್ತೆಯಲ್ಲಿ ಬೃಹತ್ ಮರ ಉರುಳಿದ ಪರಿಣಾಮ ಶುಕ್ರವಾರ ಎರಡು ತಾಸು ಸಂಚಾರ ಸ್ಥಗಿತಗೊಂಡಿತ್ತು.
ಮರ ಬಿದ್ದ ಎರಡು ಬದಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮರ ತೆರವುಗೊಳಿಸಿದ ನಂತರ ಸಂಚಾರಕ್ಕೆ ಮುಕ್ತವಾಯಿತು. ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿದ್ಯುತ್ ಮತ್ತು ದೂರವಾಣಿ ಸಂಪರ್ಕದಲ್ಲಿಯೂ ವ್ಯತ್ಯಯವಾಗಿದೆ.