ಸೊರಬ: ಜನಪರವಾದ ಕಿಸಾನ್ ಸಮ್ಮಾನ್, ಫಸಲ್ ಬಿಮಾ ಯೋಜನೆ, ಆಯುಷ್ಮಾನ್ ಹಾಗೂ ಸ್ವಚ್ಛ ಭಾರತ ಯೋಜನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಪೂಜೆ ಸಲ್ಲಿಸಿ ನಂತರ ಹಮ್ಮಿಕೊಂಡಿದ್ದ ಶ್ರಮದಾನದ ನೇತೃತ್ವ ವಹಿಸಿ ಮಾತನಾಡಿ, ಪ್ರತಿ ಹಳ್ಳಿಯ ಉದ್ಧಾರ ಗಮನದಲ್ಲಿ ಇಟ್ಟುಕೊಂಡು ಒಳಚರಂಡಿ ಹಾಗೂ ಹಸಿರು ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಯಸಿದಂತೆ ದೇವಸ್ಥಾನ ಸ್ವಚ್ಛಗೊಳಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಸೆ.28ರಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಜನ್ಮದಿನ ಇದ್ದು, ಅಂದು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ, ಬುದ್ಧಿಮಾಂದ್ಯ ಶಾಲೆಯಲ್ಲಿ ಹಣ್ಣು, ಬ್ರೆಡ್ ವಿತರಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಮಲ್ಲಿಕಾರ್ಜುನ, ಶಿವನಗೌಡ, ಗುರುಮೂರ್ತಿ, ಕೆ.ಜಿ.ಬಸವರಾಜ್, ಟೇಕಪ್ಪ, ಭವಾನಿ, ಕೃಷ್ಣಮೂರ್ತಿ, ಧರ್ಮಣ್ಣ, ಉಮೇಶ್, ಮಹೇಶ್, ಬಂಗಾರಪ್ಪ, ಶರತ್, ರಂಗಪ್ಪ, ಚಂದ್ರ, ಕೃಷ್ಣಮೂರ್ತಿ ಇತರರಿದ್ದರು.