ಶಿಕಾರಿಪುರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಾಂತಿ ದಿನ ಆಚರಿಸಲಾಯಿತು. ಸುಧೀರ್, ಶೈಲಾ ಮಡ್ಡಿ, ನಂಜುಂಡಿ, ಕಾಂಚನ ಕುಮಾರ್, ಭಾಗ್ಯಾ ರಾಯ್ಕರ್ ಇತರರಿದ್ದರು.  
ನ್ಯೂಸ್

ಅಧ್ಯಾತ್ಮದ ಮುಖೇನ ಶಾಂತಿ ಸಂದೇಶ ಸಾರುವ ಕಾರ್ಯ

ಶಿಕಾರಿಪುರ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಧ್ಯಾತ್ಮದ ಮೂಲಕ ಶಾಂತಿಯ ಬುತ್ತಿ ಹಂಚುವ ಕೆಲಸ ಮಾಡುತ್ತಿದೆ ಎಂದು ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಸುಧೀರ್ ಮಾರವಳ್ಳಿ ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವಶಾಂತಿ ದಿನ ಮತ್ತು ಪಿತಾಶ್ರೀ ಪ್ರಜಾಪಿತ ಬ್ರಹ್ಮ ಅವರ 56ನೇ ಪುಣ್ಯ ಸ್ಮತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಕೃತ ಮನಸುಗಳು ದೂರವಾಗಬೇಕಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಶಾಂತಿ, ಸಹನೆ, ಸಹಬಾಳ್ವೆ ಅಗತ್ಯವಿದೆ. ನಾವೆಲ್ಲರೂ ಒಟ್ಟಾಗಿ, ಒಂದಾಗಿ ಶಾಂತಿ ಹಂಚುವುದಲ್ಲದೆ ಮೈಗೂಡಿಸಿಕೊಂಡು ಸಾಗಬೇಕು. ಮಾನವೀಯ ಮೌಲ್ಯಗಳು ನಾಶವಾಗದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ ಮಾತನಾಡಿ, ಪಿತಾಶ್ರೀ ಬ್ರಹ್ಮ ಅವರು ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈಶ್ವರನ ವಿಶ್ವ ಕಲ್ಯಾಣ ಕಾರ್ಯಕ್ಕೆ ತನು, ಮನ, ಧನ, ಸರ್ವಸ್ವವನ್ನು ಸಮರ್ಪಿಸಿದ ತ್ಯಾಗಿ ತಪಸ್ವಿಯಾಗಿದ್ದಾರೆ. ಅವರ ಸರಳತೆ, ಉನ್ನತ ಚಿಂತನೆ, ಪಾವಿತ್ರ್ಯತೆ, ಗಂಭೀರತೆ, ನಮ್ರತೆ, ನಿಸ್ವಾರ್ಥತೆ, ಏಕತೆ, ಶಾಂತಿ, ಪ್ರೀತಿ, ಮಾನವೀಯ ಮೌಲ್ಯಗಳು ಹಾಗೂ ದಿವ್ಯ ಗುಣಗಳ ಗಣಿಯೇ ಆಗಿದ್ದರು ಎಂದರು.

ಸಂಸ್ಥೆಯ ಎಲ್ಲ ವ್ಯವಹಾರ, ಆಡಳಿತವನ್ನು ನಡೆಸಿಕೊಂಡು ಹೋಗಲು ಮಹಿಳೆಯರ ಟ್ರಸ್ಟ್ ರಚಿಸಿದರು. ಸಂಸ್ಥೆ ಗಾಗಿ ಶ್ರಮಿಸಿದ ತ್ಯಾಗಮಯಿ ಪಿತಾಶ್ರೀ ಬ್ರಹ್ಮ ಅವರ ತ್ಯಾಗ, ತಪಸ್ಸಿನಿಂದಲೆ ಸಂಸ್ಥೆಯು ವಿಶ್ವದಾದ್ಯಂತ 147 ರಾಷ್ಟ್ರಗಳಲ್ಲಿ ಸೇವೆ ವಿಸ್ತಾರಗೊಳ್ಳಲು ಈಶ್ವರನ ಸಂದೇಶ ಹರಡಲು ಮೂಲ ಕಾರಣವಾಗಿದ್ದಾರೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಶೈಲಾ ಯೋಗೇಶ್ ಮಾತನಾಡಿ, ಬ್ರಹ್ಮಕುಮಾರಿ ಸಂಸ್ಥೆಯ ಸಮಾಜ ಸುಧಾರಣೆ ಮಾಡುವ ಕಾರ್ಯವೈಖರಿ ಶ್ಲಾಘನೀಯ ಎಂದು ತಿಳಿಸಿದರು. ಬಾಪೂಜಿ ವಿದ್ಯಾಸಂಸ್ಥೆ ಮುಖ್ಯಸ್ಥ ಪಾಪಯ್ಯ ಮಾತನಾಡಿ, ಎಲ್ಲರಿಗೂ ಮೌಲ್ಯಗಳು ಮತ್ತು ಧ್ಯಾನದ ಬಗ್ಗೆ ತಿಳಿಯಬೇಕು. ಅಸೂಯೆ ಪಡದಿರುವುದು, ಎಲ್ಲರಿಗೂ ಒಳಿತನ್ನು ಬಯಸುವುದು ಸಮಾಜ ಸೇವೆಯಾಗಿದೆ. ಈ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತ ಒತ್ತಡಮುಕ್ತ ಜೀವನ ನಡೆಸಲು ಜ್ಞಾನ ಹಂಚುತ್ತಿದೆ ಎಂದರು.

ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ನಂಜುಂಡಿ, ಕದಳಿ ವೇದಿಕೆ ಅಧ್ಯಕ್ಷೆ ಕಾಂಚನಾ ಕುಮಾರ್, ಜ್ಞಾನೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಭಾಗ್ಯಾ ರಾಯ್ಕರ್, ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪಾ ಹಾಲೇಶ್, ಸತ್ಯಕ್ಕ ಸಹಕಾರಿ ಸಂಘದ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಸುನೀತಾ, ರಾಜೇಶ್ವರಿ, ಶಿವಯ್ಯ ಶಾಸೀ, ನಿವೃತ್ತ ಪಿಎಸ್‌ಐ ಕೋಮಲಾಚಾರ್, ರಾಜಶೇಖರ್ ಇತರರಿದ್ದರು.