ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿ ಸಮಿತಿಗಳಿಗೆ ಅನುದಾನದ ಚೆಕ್‌ಅನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನೀಡಿದರು. ರಶ್ಮಿ, ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಪ್ರಮಿಳಾ ಕುಮಾರಿ ಇತರರಿದ್ದರು.  
ನ್ಯೂಸ್

ಸಂಸ್ಕೃತಿ ಪ್ರತಿಬಿಂಬಿಸುವ ಶ್ರದ್ಧಾಭಕ್ತಿಯ ಕೇಂದ್ರ ದೇವಾಲಯ

ಸಾಗರ: ಧಾರ್ಮಿಕ ಕೇಂದ್ರಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಶ್ರದ್ಧಾಭಕ್ತಿ ಕೇಂದ್ರ ದೇವಾಲಯಗಳ ಶ್ರೇಯೋಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಭಾರತೀತೀರ್ಥ ಸಭಾಭವನದಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧ ಸಮಾಜಗಳ ದೇವಸ್ಥಾನ, ಸಮುದಾಯ ಭವನ ಸುಸಜ್ಜಿತವಾಗಿರಬೇಕು. ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನ ಊರಿನ ಹೆಬ್ಬಾಗಿಲು. ದೇವಸ್ಥಾನ ಪದೇಪದೆ ರಿಪೇರಿಗೆ ಬರುತ್ತಿರುವ ಹಿನ್ನೆಲೆ ಕೇರಳ ಮಾದರಿಯಲ್ಲಿ ದೇವಸ್ಥಾನ ಪುನರ್ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಸುಸಜ್ಜಿತ ಕಲ್ಯಾಣ ಮಂಟಪ, ಉದ್ಯಾನವನ ಸೇರಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.

94 ದೇವಸ್ಥಾನಗಳಿಗೆ 4 ಕೋಟಿ ರೂ. ಅನುದಾನ ನೀಡುತ್ತಿದ್ದು, ಕೆಲ ದೇವಸ್ಥಾನಗಳ ದಾಖಲೆ ಸರಿ ಇಲ್ಲದಿರುವುದರಿಂದ ಅನುದಾನ ನೀಡಲು ಸಾಧ್ಯವಾಗಿಲ್ಲ. ಕೆಲ ದೇವಸ್ಥಾನಗಳು ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ನಾವು ಕೊಡುವ ಅನುದಾನ ಕಡಿಮೆಯಾಗಿದೆ. ಅಂತಹ ದೇವಸ್ಥಾನಗಳಿಗೆ ಸಹ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಪ್ರತಿ ವರ್ಷ 100 ದೇವಸ್ಥಾನಗಳಿಗೆ ಅನುದಾನ ನೀಡುವ ಚಿಂತನೆ ಇದೆ.

ಗೋಪಾಲಕೃಷ್ಣ ಬೇಳೂರು

ಶಾಸಕ

ಕೆಳದಿ ರಾಣಿ ಚನ್ನಮ್ಮ ವೃತ್ತದಲ್ಲಿ ಪುತ್ಥಳಿ ನಿರ್ಮಾಣ, ಮಹಾದ್ವಾರ ನಿರ್ಮಾಣ ಮಾಡಲಾಗುತ್ತದೆ. ಮಲೆನಾಡಿನ ಶರಾವತಿಯ ಕಣಿವೆ ಪ್ರದೇಶಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿರು ಸೇತುವೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು. ತುಂಬೆ ದೇವಸ್ಥಾನದ ಮುಖ್ಯಸ್ಥ ಪ್ರಖ್ಯಾತ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಸಾಗರ ಕ್ಷೇತ್ರಕ್ಕೆ ಮಾತ್ರ ಮುಜರಾಯಿ ಅನುದಾನ ಬಿಡುಗಡೆಯಾಗಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಹಣ ಕೊಟ್ಟರೆ ಸಮಾಜಕ್ಕೆ ಹಣ ಕೊಟ್ಟಂತೆ ಎಂದರು.

ಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿ, ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 50 ಲಕ್ಷ ರೂ. ಮಂಜೂರಾಗಿರುತ್ತದೆ. ಸಾಗರ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು. ತಹಸೀಲ್ದಾರ್ ರಶ್ಮಿ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಪ್ರಮುಖರಾದ ಕಲಸೆ ಚಂದ್ರಪ್ಪ, ಕೆ.ಹೊಳೆಯಪ್ಪ, ರಾಜು, ಸಹನಾ ಭಟ್, ಪ್ರಮಿಳಾ ಕುಮಾರಿ ಇತರರಿದ್ದರು.