ನ್ಯೂಸ್

ಆಡ್ವಾಣಿ ಅವರಿಗೆ ಭಾರತ ರತ್ನ ಸ್ವಾಗತ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳಿಗೂ ಈ ಗೌರವ ಸಿಗಬೇಕು: ಡಿಸಿಎಂ

ವಿಜಯಪುರ: ಭಾರತದ ಮಾಜಿ ಉಪಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲಾಯಿತು. ಈ ಬೆನ್ನಲ್ಲೇ ರಾಜಕೀಯ ವಲಯ ಸೇರಿದಂತೆ ಹಲವೆಡೆಯಿಂದ ಎಲ್‌.ಕೆ. ಅಡ್ವಾಣಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈ ಕುರಿತಂತೆ ಡಿಸಿಎಂ ಡಿ.ಕೆ. ಶಿವಕುಮಾರ್​ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಸವನ ಬಾಗೇವಾಡಿಯಲ್ಲಿ ಬಸವಣ್ಣ ದೇಗುಲದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿಗೆ ಮಾಧ್ಯಮಗಳು ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅವರು, “ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವುದನ್ನು ಸ್ವಾಗತಿಸುತ್ತೇವೆ. ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಆದರೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳಾದ ಲಿಂಗೈಕ್ಯ ಶಿವಕುಮಾರ ಸ್ವಾಮಿಜಿಗಳಿಗೂ ಭಾರತ ರತ್ನ ಗೌರವ ನೀಡಬೇಕು ಎಂಬುದು ನಮ್ಮ ಆಗ್ರಹ” ಎಂದರು.

“ನಮ್ಮ ರಾಜ್ಯದಲ್ಲಿ ಅನ್ನ ದಾಸೋಹಕ್ಕೆ ಹೆಸರಾಗಿದ್ದವರು ಶಿವಕುಮಾರ ಸ್ವಾಮೀಜಿಗಳು. ಅವರಿಗೆ ಈ ಗೌರವ ಸಲ್ಲಬೇಕು ಎಂಬುದು ನಮ್ಮ ಆಗ್ರಹ. ಈ ಬಗ್ಗೆ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿತ್ತು. ಈ ವಿಚಾರದಲ್ಲಿ ತೀರ್ಮಾನ ಅವರಿಗೆ ಬಿಟ್ಟಿದೆ” ಎಂದು ಹೇಳಿದ್ದಾರೆ.