|ಪ್ರಶಾಂತ ರಿಪ್ಪನ್ಪೇಟೆ
ಈ ಭೂಮಂಡಲದಲ್ಲಿರುವ 84 ಲಕ್ಷ ಜೀವರಾಶಿಗಳಲ್ಲಿ ಗೋವುಗಳಿಗೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಭಾರತದಲ್ಲಿ ಜನಜೀವನದ ಭಾಗವಾಗಿರುವ ಗೋವುಗಳು ಧಾರ್ವಿುಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿಯೂ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇಂತಹ ಗೋವುಗಳು ಈ ಭೂಮಿಗೆ ಬಂದಿದ್ದು ಹೇಗೆ? ಗೋವುಗಳ ಮೂಲ ಪ್ರಭೇದಗಳೆಷ್ಟ್ಟು? ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳು ಸಾಕಷ್ಟು ಜನರಿಗೆ ತಿಳಿದಿಲ್ಲ.
ಗೋವು ಸದಾ ಇತರರ ಹಿತವನ್ನೇ ಕಾಪಾಡುವ ಜಗತ್ತಿನ ಪವಿತ್ರ ಪ್ರಾಣಿ. ಹೆತ್ತ ತಾಯಿ ಮೂರು ವರ್ಷ ಹಾಲುಣಿಸಿದರೆ ಗೋಮಾತೆ ನೂರು ವರ್ಷದವರೆಗೆ ಹಾಲುಣಿಸುತ್ತಾಳೆ. ಮರಗಿಡಗಳು ಇಂಗಾಲದ ಡೈಆಕ್ಸೆ ೖಡ್ ಸ್ವೀಕರಿಸಿ ಆಮ್ಲಜನಕವನ್ನು ಹೊರಸೂಸಿದರೆ; ಮನುಷ್ಯ ಆಮ್ಲಜನಕವನ್ನು ಸ್ವೀಕರಿಸಿ ಇಂಗಾಲದ ಡೈಆಕ್ಸೈಡ್ ಹೊರಬಿಡುತ್ತಾನೆ. ಆದರೆ ಆಮ್ಲಜನಕವನ್ನು ಸ್ವೀಕರಿಸಿ ಆಮ್ಲಜನಕವನ್ನೇ ಹೊರ ಬಿಡುವ ಏಕೈಕ ಪ್ರಾಣಿ ಗೋವು.
ಗೋಮಯ, ಗೋಮೂತ್ರ, ಹಾಲು, ಹಾಲಿನ ಉತ್ಪನ್ನಗಳೆಲ್ಲವೂ ಬಹುಪಯೋಗಿ. ಇಂತಹ ಮಾನವೋಪಯೋಗಿ ಜೀವಿಯಾಗಿರುವ ಗೋವು ಈ ಭೂಮಿಗೆ ಬಂದಿದ್ದು ಸಾಕ್ಷಾತ್ ಆ ಶಿವನಿಂದ. ಶಿವಾಗಮಗಳ ಆಧಾರದಂತೆ ಶಿವನ ಪಂಚಮುಖಗಳಿಂದ ಉತ್ಪತ್ತಿಯಾದ ಗೋವುಗಳ ಮೂಲವನ್ನು ಜಗತ್ತಿಗೆ ಸಾರಲು ಯಡೂರ ವೀರಭದ್ರದೇವ ಮತ್ತು ಕಾಡಸಿದ್ದೇಶ್ವರ ಕ್ಷೇತ್ರದ ಧಮಾಧಿಪತಿಗಳಾಗಿರುವ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಸ್ಥಾಪಿಸಿರುವ ವಿಶಿಷ್ಟ ಪರಿಕಲ್ಪನೆ ಗೋಕೈಲಾಸ.
ನಂದಾ ಭದ್ರಾ ಚ ಸುರಭಿಃ ಸುಶೀಲಾ ಸುಮನಾಸ್ತಥಾ
ಪಂಚ ಗಾವೋ ವಿಭೋರ್ಜಾತಾಃ ಸದ್ಯೋಜಾತಾದಿ ವಕ್ತ ್ರ
ಶಿವನಿಗೆ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂಬ ಪಂಚಮುಖಗಳು. ಆ ಒಂದೊಂದು ಮುಖದಿಂದ ಉದಿಸಿ ಬಂದ ಪಂಚ ಗೋವುಗಳೇ ಭೂಮಿಯಲ್ಲಿ ಸನಾತನ ಕಾಲದಿಂದ ಉಳಿದು, ಬೆಳೆದು ಬಂದಿವೆ. ಹಾಗೆ ಉದಿಸಿದ ಪಂಚಗೋವುಗಳನ್ನು ನಂದ, ಭದ್ರಾ, ಸುರಭಿ, ಸುಶೀಲ ಮತ್ತು ಸುಮನ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಶಿವಾಗಮಗಳ ಸಾರಸಂಗ್ರಹವಾಗಿರುವ ಶ್ರೀಸಿದ್ಧಾಂತ ಶಿಖಾಮಣಿಯ ಈ ಮೇಲಿನ ಶ್ಲೋಕವು ಇದನ್ನು ಪುಷ್ಟೀಕರಿಸುತ್ತದೆ. ಅದೇ ಆಧಾರದಲ್ಲಿ ಶಾಸ್ತŠಬದ್ಧವಾಗಿ ಯಡೂರಿನಲ್ಲಿ ಗೋಕೈಲಾಸವನ್ನು ನಿರ್ವಿುಸಲಾಗಿದೆ.
ಗೋಕೈಲಾಸದಲ್ಲಿ ಮೂಲ ತಳಿಗಳ ದೇಸಿ ಆಕಳುಗಳನ್ನು ಸಂರಕ್ಷಿಸಲಾಗಿದೆ. ಗೋರೋಚನ ಬಣ್ಣದ ನಂದ, ಕಪ್ಪು ಬಣ್ಣದ ಭದ್ರಾ, ಬಿಳಿ ಬಣ್ಣದ ಸುರಭಿ, ಧೂಮ್ರವರ್ಣದ ಸುಶೀಲ ಮತ್ತು ಕೆಂಪು ಬಣ್ಣದ ಸುಮನ ಗೋವುಗಳನ್ನು ಪ್ರತ್ಯೇಕವಾಗಿರಿಸಿ ಅವುಗಳ ಸಂಪೂರ್ಣ ವಿವರ, ಅವುಗಳನ್ನು ಪೂಜಿಸುವುದರಿಂದ ದೊರೆಯುವ ಫಲ ಹಾಗೂ ಆಯಾಯ ಹಸುಗಳ ಗೋಮಯದಿಂದ ತಯಾರಿಸುವ ವಿಭೂತಿ ಧಾರಣೆಯಿಂದ ಆಗುವ ಲಾಭ ಹೀಗೆ ಎಲ್ಲ ವಿವರವನ್ನೊಳಗೊಂಡ ನಾಮಫಲಕವನ್ನು ಗೋಕೈಲಾಸದ ಪಂಚ ವಿಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಗೋಕೈಲಾಸದಲ್ಲಿ ಪಂಚಮುಖ ಪರಮೇಶ್ವರ
ಗೋಸಂರಕ್ಷಣೆ, ದೇಸಿ ಗೋತಳಿಗಳ ಅಭಿವೃದ್ಧಿಯ ಉದ್ದೇಶವನ್ನಿರಿಸಿಕೊಂಡು ಸ್ಥಾಪನೆಯಾದ ಅಸಂಖ್ಯಾತ ಗೋಶಾಲೆಗಳು ದೇಶದಾದ್ಯಂತ ಇವೆ. ಅಂತಹ ಗೋಶಾಲೆಗಳಲ್ಲಿ ಸಾಮಾನ್ಯವಾಗಿ ಗೋಪಾಲನಾಗಿರುವ ಕೃಷ್ಣನ ಪ್ರತಿಮೆಗಳನ್ನು ಸ್ಥಾಪಿಸಲಾಗಿರುತ್ತದೆ. ಆದರೆ ಗೋವುಗಳು ಸೃಷ್ಟಿಯಾಗಿದ್ದು, ಸಾಕ್ಷಾತ್ ಶಿವನ ಪಂಚಮುಖಗಳಿಂದ ಎಂಬ ಕಾರಣಕ್ಕೆ, ಯಡೂರ ಗೋಕೈಲಾಸದಲ್ಲಿ ಪಂಚಮುಖಿ ಪರಮೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸಾಮಾನ್ಯವಾಗಿ ಗೋಶಾಲೆ, ಗೋಸ್ವರ್ಗಗಳು ಎಲ್ಲೆಡೆ ಇರುತ್ತವೆ. ಆದರೆ ಗೋಕೈಲಾಸ ಶಿವಾಗಮದ ಪರಿಕಲ್ಪನೆಯಲ್ಲಿ ನಿಮಾಣವಾಗಿರುವ ವಿಶಿಷ್ಟ ಕೇಂದ್ರ. ಯಡೂರು ಕ್ಷೇತ್ರಕ್ಕೆ ಬರುವ ಯಾತ್ರಿಗಳ ಪ್ರಮುಖ ಆಕರ್ಷಣೆ ಈ ಗೋಕೈಲಾಸ.
ಗುಣತ್ರಯಮಿದಂ ಧೇನುರ್ವಿದ್ಯಾಭೂದ್ಗೋಮಯಂ ಶುಭಂ
ಮೂತ್ರಂ ಚೋಪನಿಷತ್ ಪ್ರೋಕ್ತಂ ಕುರ್ಯåದ್ ಭಸ್ಮ ತತಃ ಪರಂ
ಚಂದ್ರಜ್ಞಾನಾಗಮದ ಈ ಶ್ಲೋಕದ ಪ್ರಕಾರ ಭಸ್ಮ ತಯಾರಿಕೆಗೆ ಮೂಲ ಕಾರಣವಾದ ಗೋವುಗಳು ಸತ್ವ, ರಜ ಮತ್ತು ತಮೋ ಗುಣಗಳ ರೂಪವಾಗಿದ್ದು, ಅವುಗಳಿಂದ ದೊರೆಯುವ ಗೋಮಯವು ವಿದ್ಯೆಯ ಸ್ವರೂಪವೆಂತಲೂ, ಗೋಮೂತ್ರವು ಉಪನಿಷತ್ತುಗಳಿಗೆ ಸರಿಸಮವೆಂತಲೂ ಬಣ್ಣಿಸಲಾಗಿದೆ.
ಅಂತೆಯೇ ಗೋಕೈಲಾಸದಲ್ಲಿ ವೀರಶೈವ ಧರ್ಮದ ಅಷ್ಟಾವರಣದಲ್ಲಿ ಪ್ರಮುಖವಾದ ವಿಭೂತಿ ತಯಾರಿಸಲಾಗುತ್ತದೆ. ಗೋಮಯದ ಹಣತೆ, ಗೋಮೂತ್ರದಿಂದ ಫಿನಾಯಿಲ್ ಮತ್ತಿತರ ಉತ್ಪನ್ನಗಳನ್ನು ತಯಾರಿಸಿ ಭಕ್ತರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಐದಾರು ವರ್ಷದ ಹಿಂದೆ 40 ಹಸುಗಳಿಂದ ಆರಂಭವಾದ ಗೋಕೈಲಾಸದಲ್ಲಿ ಇಂದು 130ಕ್ಕೂ ಹೆಚ್ಚಿನ ಗೋವುಗಳಿವೆ. ಸುತ್ತಮುತ್ತಲ ಪ್ರದೇಶದಲ್ಲಿ ಕಸಾಯಿಖಾನೆಗೆ ಕದ್ದೊಯ್ಯುವ ಗೋವುಗಳನ್ನು ಸಹ ಆರ್ಎಸ್ಎಸ್, ಭಜರಂಗದಳದ ಕಾರ್ಯಕರ್ತರು ತಡೆಗಟ್ಟಿ ಈ ಗೋಶಾಲೆಗೆ ತಂದು ಬಿಡುತ್ತಾರೆ. ಅನಾರೋಗ್ಯಕ್ಕೆ ತುತ್ತಾದ ಅಂತಹ ದುರ್ಬಲ ಹಸುಗಳನ್ನು ಸಹ ಇಲ್ಲಿ ಕಾಳಜಿಯಿಂದ ಜೋಪಾನ ಮಾಡಲಾಗುತ್ತಿದೆ.
ಭೂಕೈಲಾಸ ಯಡೂರ ಕ್ಷೇತ್ರದ ಇತಿಹಾಸ: ಕೃಷ್ಣಾ ನದಿಯ ದಂಡೆಯಲ್ಲಿರುವ ಯಡೂರು, ಮುಂಬೈ ಕರ್ನಾಟಕ ಭಾಗದ ಬಹುದೊಡ್ಡ ಧಾರ್ವಿುಕ ಕ್ಷೇತ್ರ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಶ್ರೀವೀರಭದ್ರೇಶ್ವರ ಕ್ಷೇತ್ರವನ್ನು ಭಕ್ತರು ಭೂಕೈಲಾಸ ಎಂದು ಕರೆಯುತ್ತಾರೆ. ಇಂತಹ ಭೂಕೈಲಾಸದಲ್ಲಿ ಗೋಕೈಲಾಸವನ್ನು ಸ್ಥಾಪಿಸಿದ ಕೀರ್ತಿ ಶ್ರೀಶೈಲ ಜಗದ್ಗುರುಗಳಿಗೆ ಸಲ್ಲುತ್ತದೆ.
ಪುರಾಣಗಳ ಪ್ರಕಾರ ದಕ್ಷಬ್ರಹ್ಮನು ಯಜ್ಞವನ್ನು ಮಾಡಿದ ಸ್ಥಳವೇ ಯಡೂರಾಗಿದ್ದು, ದಕ್ಷನನ್ನು ಸಂಹರಿಸಿದ ವೀರಭದ್ರನು ಅದೇ ಯಜ್ಞಕುಂಡದಲ್ಲಿ ಲಿಂಗರೂಪದಲ್ಲಿ ನೆಲೆಯಾಗಿದ್ದಾನೆ. ಇದಕ್ಕೆ ಪೂರಕವೆಂಬಂತೆ ಯಜ್ಞಕುಂಡದ ಮಾದರಿಯಲ್ಲಿಯೇ ಇಲ್ಲಿನ ಗರ್ಭಗುಡಿ ಇದ್ದು, ವೀರಭದ್ರೇಶ್ವರನು ಭದ್ರಕಾಳಿ ಸಮೇತನಾಗಿ ಲಿಂಗರೂಪದಲ್ಲಿ ನೆಲೆಯಾಗಿದ್ದಾನೆ.
ಪ್ರಾಚೀನ ಇತಿಹಾಸವನ್ನು ಹೊಂದಿರುವ ಯಡೂರ ಕ್ಷೇತ್ರವು ಕಾಲಗರ್ಭದಲ್ಲಿ ಮರೆಯಾಗಿದ್ದಾಗ; ಈ ಕ್ಷೇತ್ರಕ್ಕೆ ಆಗಮಿಸಿದ ಕಾಡಸಿದ್ದೇಶ್ವರ ಯತಿಗಳು ತಮ್ಮ ಯೋಗಶಕ್ತಿಯಿಂದ ಇಲ್ಲಿನ ಶಕ್ತಿಯನ್ನು ಮನಗಂಡು ಕ್ಷೇತ್ರವನ್ನು ಪುನರುತ್ಥಾನಗೊಳಿಸುತ್ತಾರೆ. ಮುಂದೆ 11ನೇ ಶತಮಾನದಲ್ಲಿ ರಜಪೂತ ದೊರೆ ಸಿಂಗಣದೇವನ ಕಾಲದಲ್ಲಿ ಈಗಿರುವ ಬೖಹತ್ ಕಲ್ಲಿನ ದೇವಾಲಯ ನಿಮಾಣವಾಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ.
ಸಾಂಕೇತಿಕ ಸರಳ ವಿಶಾಳಿ ಜಾತ್ರೆ
ಯಡೂರ ಕ್ಷೇತ್ರದಲ್ಲಿ ಪ್ರತಿವರ್ಷ ಅವರಾತ್ರಿ ಅಮಾವಾಸ್ಯೆಗೆ ಬೃಹತ್ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಮುಂಬೈ ಕರ್ನಾಟಕ ಭಾಗದಲ್ಲಿ ವಿಶಾಳಿ ಜಾತ್ರೆ ಎಂದು ಪ್ರಸಿದ್ಧವಾಗಿರುವ ಯಡೂರ ಜಾತ್ರೆಗೆ ಮೂರ್ನಾಲ್ಕು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಜಾತ್ರೆಯ ವೇಳೆ ರಾಷ್ಟŠಮಟ್ಟದ ಸಾಧಕರೊಬ್ಬರಿಗೆ ವಿಶ್ವಚೇತನ ಪ್ರಶಸ್ತಿ ನೀಡಲಾಗುತ್ತಿತ್ತು. ಅದರಂತೆ ಈ ವರ್ಷ ಜ.31ರಿಂದ ಫೆ.2 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಾದರೂ ಕರೊನಾ ಉಲ್ಬಣಿಸುತ್ತಿರುವುದರಿಂದ, ಸರ್ಕಾರ ಸಾರ್ವಜನಿಕ ಸಭೆ-ಸಮಾರಂಭ, ಜಾತ್ರೆ-ಉತ್ಸವಗಳಿಗೆ ತಡೆ ನೀಡಿರುವುದರಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಕೇವಲ ಸಾಂಕೇತಿಕವಾಗಿ ಧಾರ್ವಿುಕ ವಿಧಿವಿಧಾನಗಳೊಂದಿಗೆ ಸರಳ ಜಾತ್ರೆಯನ್ನು ನಡೆಸಲು ಕ್ಷೇತ್ರದ ಅಧಿಪತಿಗಳಾಗಿರುವ ಶ್ರೀಶೈಲ ಜಗದ್ಗುರುಗಳು ಸೂಚನೆ ನೀಡಿದ್ದಾರೆ.