ನ್ಯೂಸ್

ಶಿವರಾಜಕುಮಾರ್‌ ಹೊಸ ಚಿತ್ರ ಭೈರವನ ಕೊನೆ ಪಾಠ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡೈರೆಕ್ಟರ್ ಹೇಮಂತ್‌ ರಾವ್ ಕಾಂಬಿನೇಷನ್​ನ ಚಿತ್ರದ ಟೈಟಲ್ ರಿವೀಲ್ ಆಗಿದೆ. 'ಭೈರವನ ಕೊನೆ ಪಾಠ' ಅನ್ನೋ ಈ ಟೈಟಲ್ಲಿ ಹೊಸ ಥ್ರಿಲ್ ಮೂಡಿಸಿದೆ.

ಶಿವರಾಜಕುಮಾರ್‌ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕ್ಯಾಪ್ಟನ್‌ ಮಿಲ್ಲರ್‌, ಕರಟಕ ದಮನಕ, ಭೈರತಿ ರಣಗಲ್‌, ಉತ್ತರಕಾಂಡದ ಜೊತೆಗೆ ಹೊಸ ಚಿತ್ರದ ಶೀರ್ಷಿಕೆ ಜುಲೈ ನಾಲ್ಕರಂದು ಬಿಡುಗಡೆಯಾಗಿದೆ. ಅದು ಭೈರವನ ಕೊನೆ ಪಾಠ.

ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಭಿತ್ತಿಪತ್ತವನ್ನು ಲಗತ್ತಿಸಿರುವ ಶಿವರಾಜಕುಮಾರ್‌, ಇನ್ನೂ ಹೇಳಲು ಉಳಿದಿರುವ ಅಥವಾ ಹೇಳಬೇಕಾದ ಬಹಳ ಮುಖ್ಯವಾದ ಪಾಠ ಎಂದು ಟಿಪ್ಪಣಿಯನ್ನೂ ಬರೆದುಕೊಂಡಿದ್ದಾರೆ. ಇದು ಕುತೂಹಲ ಮೂಡಿಸಿದೆ.

ಡಾ. ವೈಶಾಖ್‌ ಜೆ. ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡವಲ್ಲದೇ ತೆಲುಗು, ತಮಿಳು, ಮಲಯಾಳಂ ನಲ್ಲೂ ಈ ಚಿತ್ರ ರೂಪುಗೊಳ್ಳಲಿದೆ. ದಕ್ಷಿಣ ಭಾಷೆಗಳ ಸಿನಿಮಾ ಲೋಕಕ್ಕೆ ನೀಡುತ್ತಿರುವ ಶಿವಣ್ಣನ ಮೊದಲ ಸಿನಿಮಾ ಇದಾಗಿದೆ.

ಜೈಲರ್‌ ನಲ್ಲಿನ ನಟನೆಗೆ ಎಲ್ಲ ದ್ರಾವಿಡ ಭಾಷೆಗಳಲ್ಲೂ ಶಿವರಾಜಕುಮಾರ್‌ ಕುರಿತು ಒಳ್ಳೇಯ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಮತ್ತೊಂದು ಅಂಥದ್ದೇ ಚಿತ್ರ ತೆರೆಗೆ ತರುವ ಪ್ರಯತ್ನವಾಗುತ್ತಿದೆ.

ಹೇಮಂತ್‌ ಮಾಧ್ಯಮಗಳೊಂದಿಗೆ ಹಂಚಿಕೊಂಡಂತೆ, ಇದು ಆಕ್ಷನ್‌ ಸಿನಿಮಾ. ಇದು ಅವರ ಐದನೇ ಸಿನಿಮಾ. ಲಭ್ಯ ಮಾಹಿತಿ ಪ್ರಕಾರ ಇದು ಚರಿತ್ರೆಯ ಸಂಗತಿಗಳನ್ನು ಆಧರಿಸಿದ ಸಿನಿಮಾ. ಎಲ್ಲವೂ ಅಂದುಕೊಂಡಂತೆ ನಡೆದರೆ 2025 ಕ್ಕೆ ಬಿಡುಗಡೆಯಾಗಲಿದೆ.

ಶಿವರಾಜಕುಮಾರ್‌ ಸಹ ಉಳಿದ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಮಧ್ಯೆ ಹೊಸ ಚಿತ್ರಕ್ಕೂ ಸಮಯ ಮಾಡಿಕೊಳ್ಳಬೇಕಿದೆ. ಜುಲೈ-12 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಣ್ಣನ ಅಭಿಮಾನಿಗಳು ಬರ್ತ್‌ಡೇ ಮಾಡೋಕೆ ಸಿದ್ಧತೆ ಕೂಡ ಶುರು ಮಾಡಿದ್ದಾರೆ. ಇನ್ನುಳಿದಂತೆ ಆ ದಿನ ಅದೆಷ್ಟು ಸಿನಿಮಾಗಳು ಅನೌನ್ಸ್ ಆಗುತ್ತವೆ ಅನ್ನೋ ಕುತೂಹಲ ಈಗಲೇ ಮೂಡಿದೆ ಅಂತಲೇ ಹೇಳಬಹುದು.