ಗುಡ್ಡೇಕಲ್‌ನಲ್ಲಿ 151 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ನಿರ್ಮಾಣದ ಶಿಲಾನ್ಯಾಸವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೆರವೇರಿಸಿದರು. ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಎಸ್.ಶಿವಕುಮಾರ್, ಡಿ.ರಾಜಶೇಖರಪ್ಪ, ಯಮುನಾ ರಂಗೇಗೌಡ ಇದ್ದರು. 
ನ್ಯೂಸ್

ದ್ರಾವಿಡ ಸಂಸ್ಕೃತಿಗೆ ಶಿವನೇ ಆರಾಧ್ಯ ದೈವ: ಬೆಕ್ಕಿನಕಲ್ಮಠ ಶ್ರೀ

ಶಿವಮೊಗ್ಗ: ದ್ರಾವಿಡ ಸಂಸ್ಕೃತಿಯ ಮೂಲ ಕೇಂದ್ರ ಕರ್ನಾಟಕ, ತಮಿಳುನಾಡು ಮತ್ತು ಕೇರಳವಾಗಿದೆ. ಆದರೂ ಈ ದ್ರಾವಿಡ ಸಂಸ್ಕೃತಿಗೆ ಶಿವನೇ ಆರಾಧ್ಯ ದೈವ ಎಂದು ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಗುಡ್ಡೇಕಲ್ ದೇವಸ್ಥಾನದ ಆವರಣದಲ್ಲಿ ಭಾನುವಾರ ಶ್ರೀ ಬಾಲಸುಬ್ರಹ್ಮಣ್ಯ ಟ್ರಸ್ಟ್‌ನಿಂದ 151 ಅಡಿ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ವಿಗ್ರಹದ ಶಿಲಾನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿ, ಈ ಹಿಂದೆ ಗುಡ್ಡೇಕಲ್ ಸಿದ್ದೇಶ್ವರ ಕ್ಷೇತ್ರವಾಗಿತ್ತು. ಸಿದ್ದೇಶ್ವರ ದೇವಸ್ಥಾನವೂ ಕೆಳಗಡೆ ಇರುವುದಕ್ಕೆ ಸಾಕ್ಷಿಯಾಗಿದೆ. ಇದನ್ನು ಬಾಲಸುಬ್ರಹ್ಮಣ್ಯ ದೇವಸ್ಥಾನ ಸ್ವಾಮಿ ಟ್ರಸ್ಟ್‌ನವರು ವಹಿಸಿಕೊಂಡ ಬಳಿಕ ಇದು ಪವಾಡ ಸದೃಶ ಕ್ಷೇತ್ರವಾಗಿ ಬದಲಾಗಿದೆ ಎಂದರು.
ನಾಡಿನ ಸಂಸ್ಕೃತಿ, ಪರಂಪರೆ, ಭಕ್ತಿ ಸಮರ್ಪಣೆ ಮಾಡುವರಲ್ಲಿ ತಮಿಳು ಸಮಾಜ ಉತ್ತುಂಗದಲ್ಲಿದೆ. ಹರ ಹರ ಜಾತ್ರೆಯಲ್ಲಿ ಭಕ್ತರು ಮೈಗೆಲ್ಲ ಕಬ್ಬಿಣದ ಕೊಂಡಿಗಳನ್ನು ಸಿಕ್ಕಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುವುದನ್ನು ಪ್ರತ್ಯೇಕ್ಷವಾಗಿ ಕಂಡಿದ್ದೇವೆ. ಗುಡ್ಡೇಕಲ್‌ನಲ್ಲಿ ಮಾತ್ರವಲ್ಲದೇ ದೇಶ-ವಿದೇಶದಲ್ಲೂ ತಮಿಳರ ಸಂಘಟನೆ ದೊಡ್ಡಮಟ್ಟದಿದೆ ಎಂದರು.
ಮಲೇಷಿಯಾದಲ್ಲಿ 141 ಅಡಿ ಎತ್ತರ ಬಾಲಸುಬ್ರಹ್ಮಣ್ಯ ವಿಗ್ರಹ ನಿರ್ಮಿಸಲಾಗಿದೆ. ತಮ್ಮದೇ ಅದ ವಿಶಿಷ್ಟ ಸಂಪ್ರದಾಯದ ಮೂಲಕ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ಕೆಲಸ ಸಾಮಾನ್ಯವಲ್ಲ. ಅದನ್ನು ತಮಿಳು ಸಮಾಜ ಮಾಡುತ್ತಿದೆ. ಈಗ ಗುಡ್ಡೇಕಲ್‌ನಲ್ಲಿ 151 ಅಡಿ ಎತ್ತರದ ವಿಗ್ರಹ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದು ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ರಾಜ್ಯದಲ್ಲಿ ಬರಗಾಲ ಬಂದಿದೆ. ಸರ್ಕಾರದ ಮೇಲೆ ಹೆಚ್ಚು ಅವಲಂಬನೆ ಆಗದೆ ನಿಮ್ಮ ಶಕ್ತಿಗನುಸಾರ ಧನಸಹಾಯ ಮಾಡಿ ನಿಮ್ಮ ಟ್ರಸ್ಟ್‌ನ ಯೋಜನೆ ಕನಸು ನನಸಾಗಿಸಿಕೊಳ್ಳಬೇಕಿದೆ. 42 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಇಲ್ಲಿ ಬಾಲಸುಬ್ರಹ್ಮಣ್ಯ ದೇವರ ಮೂರ್ತಿ ಪ್ರತಿಷ್ಠಾಪನೆಗೊಂಡರೆ ಪ್ರವಾಸೋದ್ಯಮ ಉತ್ತಮವಾಗಲಿದೆ ಎಂದರು.
ಶ್ರೀ ಬಾಲಸುಬ್ರಹ್ಮಣ್ಯ ಟ್ರಸ್ಟ್ ಅಧ್ಯಕ್ಷ ಡಿ.ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಕಾಂಗ್ರೆಸ್ ಮುಖಂಡ ವೈ.ಎಚ್.ನಾಗರಾಜ್, ಮೇಯರ್ ಎಸ್.ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ಮಾಜಿ ಸದಸ್ಯ ಮೋಹನ್ ರೆಡ್ಡಿ, ಟ್ರಸ್ಟಿನ ಪದಾಧಿಕಾರಿಗಳಾದ ಆರ್.ಅರುಣಾಚಲಂ, ಎಂ.ಪಿ.ಸಂಪತ್, ಟಿ.ರಘುಕುಮಾರ್, ಎಂ.ಪಿ.ಗಣೇಶ್, ಪಿ.ಸುಬ್ರಮಣಿ, ಎಂ.ಸುಬ್ರಮಣಿ, ಎ.ವಿಜಯನ್, ಕೆ.ಸುಬ್ರಮಣಿ, ಲೋಕೇಶ್ ಉಪಸ್ಥಿತರಿದ್ದರು.