ನ್ಯೂಸ್

ಗೋಡೆಬರಹ ಬರೆದವರು ಹೇಡಿಗಳು, ಶಾಸಕ ಈಶ್ವರಪ್ಪ ಕಿಡಿ

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಹಲವೆಡೆ ಜಾಯಿನ್ ಸಿಎಫ್‌ಐ ಎಂಬ ಗೋಡೆಬರಹ ಬರೆದವರು ಹೇಡಿಗಳು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐನವರಿಗೆ ಮುಂದೆ ನಿಂತು ಇಂತಹ ಕೃತ್ಯಗಳನ್ನು ಎಸೆಗಲು ಧೈರ್ಯವಿಲ್ಲ. ರಾತ್ರಿ ಬಂದು ಚೂರಿ ಹಾಕುವುದು, ಬಾಂಬ್ ಹಾಕುವುದು ಮಾಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಆರಂಭದಿಂದಲೂ ಹೇಡಿ ಕೆಲಸವನ್ನು ಪಿಎಫ್‌ಐ ಮಾಡುತ್ತಿದೆ. ದೇಶ ಮತ್ತು ಅಭಿವೃದ್ಧಿ ಬಗ್ಗೆ ಪಿಎಫ್‌ಐಗೆ ಯಾವುದೇ ಕಲ್ಪನೆ ಇಲ್ಲ. ವಿಶ್ವದಲ್ಲಿ ಭಾರತದ ಹಿಂದುತ್ವ ಅಳಿಸಬೇಕೆಂದು ಪಿಎಫ್‌ಐ ದೇಶದ್ರೋಹಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅಂತಹ ಹುಲಿಗಳು ಇಲಿಗಳ ರೂಪದಲ್ಲಿರುವ ಪಿಎಫ್‌ಐನ್ನು ಹೊಸಕಿ ಹಾಕಿದೆ ಎಂದರು.

ಸ್ವಾತಂತ್ರೃ ಬಂದ ಬಳಿಕ ಕಾಂಗ್ರೆಸ್ ಪಿಎಫ್‌ಐನ್ನು ದೇಶದಲ್ಲಿ ಪೋಷಿಸಿಕೊಂಡು ಬರುತ್ತಿದೆ. ಅದರ ಕುಮ್ಮಕ್ಕಿನಿಂದ ಪಿಎಫ್‌ಐನವರು ಗೋಹತ್ಯೆ, ಗೋ ಕಳ್ಳತನ ಮಾಡುತ್ತಿದ್ದರು. ಅತ್ಯಾಚಾರ ನಡೆಸುತ್ತಿದ್ದರು. ಅದನ್ನೇ ಇನ್ನೂ ಮುಂದುವರಿಸುತ್ತಿದ್ದೇವೆ ಎಂದು ತೋರಿಸಲು ಅಲ್ಲೊಂದು ಇಲ್ಲೊಂದು ಇಂತಹ ಕೃತ್ಯ ಮಾಡುತ್ತಿದ್ದಾರೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂತಹ ಚಟುವಟಿಕೆಗಳನ್ನು ಮಟ್ಟ ಹಾಕಲಿದೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.