ನಂದಿನಿ ಸಿಹಿ ಉತ್ಸವಕ್ಕೆ ಎನ್.ಎಚ್.ಶ್ರೀಪಾದರಾವ್ ಚಾಲನೆ ನೀಡಿದರು. ದಿನೇಶ್, ಡಿ.ಆನಂದ, ಎಸ್.ಜಿ.ಶೇಖರ್ ಉಪಸ್ಥಿತರಿದ್ದರು. 
ನ್ಯೂಸ್

ನಂದಿನಿ ಸಿಹಿ ಉತ್ಸವಕ್ಕೆ ಶಿಮುಲ್ ಅಧ್ಯಕ್ಷರ ಚಾಲನೆ

ಶಿವಮೊಗ್ಗ: ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ)ನಿಂದ ತಯಾರಿಸಿದ ನಂದಿನಿ ಹಾಲಿನ ಉತ್ಪನ್ನಗಳ ಸಿಹಿ ತಿನಿಸುಗಳ ಮಾರಾಟ ನಂದಿನಿ ಸಿಹಿ ಉತ್ಸವಕ್ಕೆ ಜಿಪಂ ಸಮೀಪದ ಮಾರಾಟ ಮಳಿಗೆಯಲ್ಲಿ ಶಿಮುಲ್ ಅಧ್ಯಕ್ಷ ಎನ್.ಎಚ್.ಶ್ರೀಪಾದ ರಾವ್ ಮಂಗಳವಾರ ಚಾಲನೆ ನೀಡಿದರು.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗ್ರಾಹಕರಿಗೆ ನಂದಿನಿ ಹಾಲಿನಿಂದ ತಯಾರಿಸಿದ ಸಿಹಿ ಉತ್ಪನ್ನಗಳನ್ನು ಶೇ.20ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಕ್ಕೂಟವು 1,253 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ ಎರಡು ಬಾರಿ ಸರಾಸರಿ 6.50 ಲಕ್ಷ ಕೆಜಿ ಹಾಲನ್ನು ಸಂಗ್ರಹಿಸುತ್ತದೆ.
ಸಂಗ್ರಹಿಸಿದ ಹಾಲನ್ನು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಡೇರಿ ಘಟಕಗಳಲ್ಲಿ ಸಂಸ್ಕರಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ 1,750 ಹಾಲಿನ ಡೀಲರ್‌ದಾರರು, 114 ಫ್ರಾಂಚೈಸಿ ಪಾರ್ಲರ್‌ದಾರರು ಹಾಗೂ 48 ಒಕ್ಕೂಟದ ಸ್ವಂತ ಮಿಲ್ಕ್ ಪಾರ್ಲರ್‌ಗಳ ಮೂಲಕ ಪ್ರತಿನಿತ್ಯ 2.70 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 55 ಸಾವಿರ ಕೆಜಿ ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ನಂದಿನಿ ಹಾಲಿನ ವಿವಿಧ ಉತ್ಪನ್ನಗಳನ್ನು ಹಾಗೂ ನಂದಿನಿ ಸಿಹಿ ತಿನಿಸುಗಳನ್ನೂ ಮಾರಾಟ ಮಾಡಲಾಗುತ್ತಿದೆ.
ಸಿಹಿ ಉತ್ಸವಕ್ಕೆ ಚಾಲನೆ ದೊರೆತ ಸಂದರ್ಭದಲ್ಲಿ ಶಿಮುಲ್ ನಿರ್ದೇಶಕರಾದ ಡಿ.ಆನಂದ, ದಿನೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಮುಂತಾದವರಿದ್ದರು.