ಶಿವಮೊಗ್ಗ: ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ ಮತ್ತು ಉತ್ತೇಜಿಸುವ ಸಲುವಾಗಿ ಫೆ.1ರಿಂದ ಮಾರ್ಚ್ 31ರವರೆಗೆ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಿ ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ) ಆದೇಶಿಸಿದೆ.
ಶಿಮುಲ್ ಕಚೇರಿಯಲ್ಲಿ ಶುಕ್ರವಾರ ಒಕ್ಕೂಟದ ಅಧ್ಯಕ್ಷ ಎಚ್.ಎನ್.ವಿದ್ಯಾಧರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ದರ ಪರಿಷ್ಕರಿಸಲು ತೀರ್ಮಾನಿಸಿದೆ.
ಶಿಮುಲ್ ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದು, ಬೇಸಿಗೆ ಹಂಗಾಮಿನಲ್ಲಿ ಹೈನುರಾಸುಗಳ ನಿರ್ವಹಣಾ ವೆಚ್ಚ ಅಧಿಕವಾಗುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ಲಾಭಾಂಶ ಕಡಿಮೆಯಾಗುತ್ತಿದೆ. ಆದರೂ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಸಲುವಾಗಿ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರ ಪರಿಷ್ಕರಿಸಿದೆ.
ಒಕ್ಕೂಟದಿಂದ ಸಂಘಗಳಿಗೆ ಪ್ರಸ್ತುತ ಶೇ.4ರಷ್ಟು ಫ್ಯಾಟ್, ಶೇ.8.50ರಷ್ಟು ಎಸ್‌ಎನ್‌ಎಫ್ ಇರುವ ಪ್ರತಿ ಕೆ.ಜಿ.ಹಾಲಿಗೆ 32.09 ರೂ. ಇದ್ದು, ಪರಿಷ್ಕೃತ ದರ 34.18 ರೂ. ಆಗಲಿದೆ. ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ಶೇ.4ರಷ್ಟು ಫ್ಯಾಟ್, ಶೇ.8.50ರಷ್ಟು ಎಸ್‌ಎನ್‌ಎಫ್ ಇರುವ ಪ್ರತಿ ಲೀ. ಹಾಲಿಗೆ 30.13 ರೂ. ಇದ್ದು, ಪರಿಷ್ಕೃತ ದರ 32.22 ರೂ. ಆಗಲಿದೆ ಎಂದು ಒಕ್ಕೂಟ ತಿಳಿಸಿದೆ.
ಉಪಾಧ್ಯಕ್ಷ ಚೇತನ್ ಎಸ್. ನಾಡಿಗೇರ್, ನಿರ್ದೇಶಕರಾದ ಆರ್.ಎಂ.ಮಂಜುನಾಥ ಗೌಡ, ಡಿ.ಆನಂದ, ಜಗದೀಶಪ್ಪ ಬಣಕಾರ, ಟಿ.ಶಿವಶಂಕರಪ್ಪ, ಜಿ.ಪಿ.ರೇವಣಸಿದ್ದಪ್ಪ, ಎಚ್.ಕೆ.ಬಸಪ್ಪ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ್ರು, ಜಿ.ಬಿ.ಶೇಖರಪ್ಪ, ಎಸ್.ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಉಪಸ್ಥಿತರಿದ್ದರು.