ನ್ಯೂಸ್

ರೈತ ಸಂಘದಿಂದ 12ರಂದು ಪ್ರತಿಭಟನೆ

ಶಿವಮೊಗ್ಗ: ರೈತರು ಹಾಗೂ ಗ್ರಾಹಕರ ವಿರೋಧಿಯಾಗಿರುವ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಸೆ.12ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ತೆರೆಮರೆಯಲ್ಲಿ ಜಾರಿಗೆ ಯತ್ನ ನಡೆಯುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದಿಂದ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಮುಂತಾದ ಯೋಜನೆಗಳಲ್ಲಿ ವಿದ್ಯುತ್ ಸಂಪರ್ಕ ಪಡೆದವರು ಶುಲ್ಕ ಪಾವತಿಸಬೇಕಾಗುತ್ತದೆ. ರೈತರ ಪಂಪ್‌ಸೆಟ್‌ಗಳಿಗೂ ಉಚಿತ ವಿದ್ಯುತ್ ಸಿಗುವುದಿಲ್ಲ. ಇದು ರೈತರ ಪಾಲಿಗೆ ಹೊರೆಯಾಗಿ ಪರಿಣಮಿಸಲಿದೆ ಎಂದು ತಿಳಿಸಿದರು.

ಈ ಕಾಯ್ದೆ ಜಾರಿಯಾದರೆ ಗ್ರಾಹಕರು ಪ್ರೀಪೇಯ್ಡ ವ್ಯವಸ್ಥೆಯಡಿ ಮೊದಲೇ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಪಡೆಯಬೇಕಾಗುತ್ತದೆ. ಇದು ಅಡುಗೆ ಅನಿಲದ ಸಬ್ಸಿಡಿ ಮಾದರಿಯಲ್ಲಿರುತ್ತದೆ. ಆರಂಭದ ಕೆಲ ತಿಂಗಳು ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಿ ಬಳಿಕ ಬಂದ್ ಮಾಡಲಾಗಿತ್ತು. ಮುಂದೆ ವಿದ್ಯುತ್‌ಗೂ ಇದೇ ಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಕಾಯ್ದೆಯನ್ನು ರೈತ ಸಂಘ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ತಾಲೂಕು ಅಧ್ಯಕ್ಷ ಸಿ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಜಿಲ್ಲಾ ಹಸಿರು ಸೇನೆ ಸಂಚಾಲಕ ಎಂ.ಡಿ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.