ನ್ಯೂಸ್

ಮಳೆಯಿಂದ ಶಿವಮೊಗ್ಗ ಜಿಲ್ಲೆಯ ಮೂರು ಹೋಬಳಿ ಶಾಲೆಗಳಿಗೆ ರಜೆ ಘೋಷಣೆ

Shivamogga

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಗುರುವಾರವೂ ಮಳೆಯಬ್ಬರ ಮುಂದುವರಿದಿದ್ದು, ಹೊಸನಗರ ತಾಲೂಕಿನ ಮೂರು ಹೋಬಳಿಗಳ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಲಿಂಗನಮಕ್ಕಿ ಜಲಾಶಯಕ್ಕೆ 24 ತಾಸಿನಲ್ಲೇ ಎರಡು ಅಡಿ ನೀರು ಹರಿದುಬಂದಿದೆ. ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಕಳೆದ 11 ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಒಟ್ಟು 111ಮನೆಗಳು ನೆಲಕ್ಕುರುಳಿವೆ.

ತುಂಗಾ, ಭದ್ರಾ, ಮಾಲತಿ, ಕುಮದ್ವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಲಿಂಗನಮಕ್ಕಿ ಜಲಾಶಯಕ್ಕೆ 46 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನೀರಿನ ಸಂಗ್ರಹ 1,809 ಅಡಿಗೆ ತಲುಪಿದ್ದು ಜಲಾಶಾಯ ಶೇ.79ರಷ್ಟು ಭರ್ತಿಯಾಗಿದೆ. ಜಲಾಶಯದ ಕೆಳ ಭಾಗದ ಜನರು ಎಚ್ಚರಿಕೆ ವಹಿಸುವಂತೆ ಶೀಘ್ರದಲ್ಲೇ ಕೆಪಿಸಿಯಿಂದ ಅಂತಿಮ ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ.

ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯಕ್ಕೆ 34 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೂ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 28 ಸಾವಿರ ಕ್ಯೂಸೆಕ್ ಒಳಹರಿವಿದೆ.

ನಿರಂತರ ಮಳೆ, ವಾತಾವರಣದಲ್ಲಿನ ಉಷ್ಣಾಂಶ ಕುಸಿದು ಶೀತ ವಾತಾವರಣ ಹೆಚ್ಚುತ್ತಿರುವುದರಿಂದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ಅಡಕೆ ಬೆಳೆಗಾರರಿಗೆ ಆತಂಕ ಎದುರಾಗಿದೆ. ಈ ವಾತಾವರಣದಲ್ಲಿ ಅಡಕೆಗೆ ಕೊಳೆ ರೋಗ ತಗುಲುವ ಸಂಭವ ಹೆಚ್ಚಿರುವುದರಿಂದ ಬೆಳೆಗಾರರು ಚಿಂತೆಗೆ ಒಳಗಾಗಿದ್ದಾರೆ. ಬೋರ್ಡೋ ದ್ರಾವಣ ಸಿಂಪರಣೆಗೆ ಮಳೆ ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಕೊಳೆ ತಗುಲಿದರೆ ವ್ಯಾಪಕ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.

ರಣಜಿ ಪಂದ್ಯಾವಳಿಗಳಿಂದ ಗಮನಸೆಳೆಯುತ್ತಿದ್ದ ಶಿವಮೊಗ್ಗದ ನವುಕೆ ಕೆಎಸ್‌ಸಿಎ ಮೈದಾನ ಇದೀಗ ಈಜು ಕೊಳದಂತಾಗಿದೆ. ಸತತ ಮಳೆಯಿಂದ ನೀರು ನಿಂತು ಮೈದಾನ ಸಂಪೂರ್ಣ ಜಲಾವೃತವಾಗಿದೆ. ನವುಲೆ ಕೆರೆಯಂಗಳದಲ್ಲೇ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಿರುವುದರಿಂದ ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತದೆ. ನೀರು ಒಣಗಿದ ನಂತರ ಮೈದಾನವನ್ನು ಮೊದಲಿನಂತೆ ಸುಸ್ಥಿತಿಗೆ ತರುವುದು ಕೆಎಸ್‌ಸಿಎಗೆ ಪ್ರತಿ ವರ್ಷದ ಕಾಯಕವಾಗಿದೆ.