ನ್ಯೂಸ್

ದೀಪಾವಳಿ ಹಬ್ಬಕ್ಕೆಂದು ರೈಲನ್ನೇರಿ ಊರಿಗೆ ಬರ್ತಿದ್ದ ಯುವತಿಗಾಗಿ ಮಾರ್ಗ ಮಧ್ಯೆಯೇ ಕಾದಿದ್ದ ಜವರಾಯ!

ಶಿವಮೊಗ್ಗ: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಜನಶತಾಬ್ದಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದ ಯುವತಿಯೊಬ್ಬಳು ಆಯತಪ್ಪಿ ಗುರುವಾರ ರಾತ್ರಿ ತುಂಗಾ ನದಿಗೆ ಬಿದ್ದಿದ್ದು ಯುವತಿಯ ಹುಡುಕಾಟ ಮುಂದುವರಿದಿದೆ.

ಗಾಡಿಕೊಪ್ಪದ ಸಹನಾ (24) ಆಯತಪ್ಪಿ ನದಿಗೆ ಬಿದ್ದವಳು. ಕೋಟೆ ಠಾಣೆ ಪೊಲೀಸರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಎಂಸಿಎ ಓದುತ್ತಿದ್ದ ಸಹನಾ ದೀಪಾವಳಿ ಹಬ್ಬ ಮತ್ತು ನ.22ರಂದು ನಗರದ ಎನ್‌ಇಎಸ್ ಕಾಲೇಜಿನಲ್ಲಿ ಸಿಎ(ಲೆಕ್ಕ ಪರಿಶೋಧಕ) ಪರೀಕ್ಷೆ ಇದ್ದ ಕಾರಣ ರೈಲಿನಲ್ಲಿ ತಾಯಿಯೊಂದಿಗೆ ಪ್ರಯಾಣ ಮಾಡುತ್ತಿದ್ದಳು. ತುಂಗಾ ನದಿ ಸೇತುವೆ ಮೇಲೆ ರೈಲು ಬರುವ ವೇಳೆ ಆಕೆಯ ತಾಯಿ ಸುಜಾತಾ ಶೌಚ ಗೃಹಕ್ಕೆ ತೆರಳಿದ್ದರು. ಹಾಗಾಗಿ ಸಹನಾ ಕೂಡ ರೈಲ್ವೆ ಬೋಗಿಯ ಬಾಗಿಲ ಬಳಿ ನಿಂತುಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಳು.

ಯುವತಿ ನದಿಗೆ ಬಿದ್ದ ದೃಶ್ಯವನ್ನು ಕಂಡ ಮಗುವೊಂದು ಕಿರುಚಿದ್ದು, ರೈಲಿನಲ್ಲಿದ್ದವರು ತಕ್ಷಣವೇ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ರೈಲು ನಿಲ್ದಾಣಕ್ಕೆ ಬಂದು ನಿಂತಿದೆ. ನಂತರ ಅಗ್ನಿಶಾಮಕದಳ, ಪೊಲೀಸರು ರಾತ್ರಿ 2.30ರವರೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಯುವತಿ ಸುಳಿವು ಸಿಕ್ಕಿರಲಿಲ್ಲ. ಇದೀಗ ಶುಕ್ರವಾರ ಬೆಳಗ್ಗೆಯಿಂದ ಮತ್ತೆ ಹುಡುಕಾಟ ಆರಂಭಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.