ಶಿವಮೊಗ್ಗ: ಮುಂಗಾರು ಸಂದರ್ಭದಲ್ಲಿ ಅತಿವೃಷ್ಠಿಯಿಂದ ಉಂಟಾಗಿರುವ ಬೆಳೆ ಹಾನಿಯ ಸಮೀಕ್ಷ ನಡೆಸಲಾಗಿದೆ. ಮೂರು ಸಾವಿರ ಹೆಕ್ಟೇರ್‌ನಲ್ಲಿ ಉಂಟಾಗಿದ್ದ ಹಾನಿಗೆ ಸಂಬಂಧಿಸಿದ ವಿವರಗಳನ್ನು ಪರಿಹಾರ್ ಸಾಪ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಇದುವರೆಗೆ ಶೇ.80ರಷ್ಟು ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಗೆ ಎನ್‌ಡಿಆರ್‌ಎಫ್ ಮಾನದಂಡದಂತೆ ಪ್ರತ್ಯೇಕ ಪರಿಹಾರ ನಿಗದಿಯಾಗಿದೆ. ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಪರಿಹಾರ ಮೊತ್ತ ಪೂರ್ವನಿಗದಿಯಾಗಿರುತ್ತದೆ. ಬೆಳೆ ನಷ್ಟದ ಪ್ರಮಾಣ ಹಾಗೂ ಜಮೀನಿನ ವಿವರವನ್ನು ಮಾತ್ರ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದರು.
ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ಆ ಜಿಲ್ಲೆಗಳಿಗೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಶಿವಮೊಗ್ಗ ಜಿಲ್ಲೆಗೆ ತಂಡ ಭೇಟಿ ನೀಡಿಲ್ಲ. ನಮ್ಮಿಂದ ಅಗತ್ಯ ಮಾಹಿತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪರಿಹಾರ ಕಾರ್ಯಕ್ಕೆ ಹಣಕಾಸಿನ ಸಮಸ್ಯೆಗಳಿಲ್ಲ. ಎಲ್ಲ ತಾಲೂಕಿನ ತಹಸೀಲ್ದಾರ್‌ಗಳ ಖಾತೆಗೆ ಒಟ್ಟು 8 ಕೋಟಿ ರೂ. ಜಮಾ ಮಾಡಲಾಗಿದೆ. ತ್ವರಿತ ಪರಿಹಾರ ವಿತರಣೆಗೆ ಸಮಸ್ಯೆಯಿಲ್ಲ. ಮನೆ ಹಾಗೂ ಬೆಳೆ ಹಾನಿಗೆ ಸರ್ಕಾರದಿಂದಲೇ ನೇರವಾಗಿ ಪರಿಹಾರ ವಿತರಣೆಯಾಗಲಿದೆ ಎಂದರು.