ಶಿವಮೊಗ್ಗ: ಭದ್ರಾವತಿ ತಾಲೂಕು ರಂಗಾಪುರದಲ್ಲಿ ನಾಲ್ಕು ತಿಂಗಳ ಹಿಂದೆ ದಾನವಾಡಿಯ ಕೆಲವು ಮುಖಂಡರು ದಲಿತರ ಮೇಲೆ ಜಾತಿ ವೈಷಮ್ಯದಿಂದ ಹಲ್ಲೆ ನಡೆಸಿದ್ದು, ಅವರ ವಿರುದ್ಧ ದೂರು ದಾಖಲಿಸಿದ್ದರೂ ಹೊಳೆಹೊನ್ನರೂ ಠಾಣೆ ಸಿಪಿಐ ತಪ್ಪಿತಸ್ಥರನ್ನು ಬಂಧಿಸಿಲ್ಲ. ಹೀಗಾಗಿ ಅವರನ್ನು ವರ್ಗಾವಣೆ ಮಾಡಬೇಕು. ದೌರ್ಜನ್ಯಕ್ಕೊಳಗಾದ ದಲಿತರಿಗೆ ಕೂಡಲೇ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಡಿಎಸ್‌ಎಸ್ ಕಾರ್ಯಕರ್ತರು ಗುರುವಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದ ಕೆಲವು ಮುಖಂಡರು 2019ರಲ್ಲಿ ರಂಗಾಪುರ ಗ್ರಾಮದ ರಂಗನಾಥ ಸ್ವಾಮಿ ದೇವಾಲಯ ಟ್ರಸ್ಟ್ ರಚಿಸಿಕೊಂಡು ದೇವಾಲಯ ಅಭಿವೃದ್ಧಿಪಡಿಸುತ್ತಿದ್ದರು. ಇದನ್ನು ಸಹಿಸದ ಕೆಲವು ವ್ಯಕ್ತಿಯಗಳು ಅನ್ನದಾಸೋಹಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೊಳೆಹೊನ್ನೂರು ಠಾಣೆಗೆ ದೂರು ನೀಡಲಾಗಿತ್ತು. ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದಾರೆ. ಕೆಲವರು ಪ್ರಾಣ ಭಯದಿಂದ ಗ್ರಾಮವನ್ನೇ ತೊರೆದಿದ್ದಾರೆ. ಸಿಪಿಐ ತಪ್ಪಿತಸ್ಥರ ಪರವಾಗಿ ನಿಂತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದಲಿತರ ಮೇಲೆ ಹಲ್ಲೆ ನಡೆಸಿದವರನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಟಿ.ಎಚ್.ಹಾಲೇಶಪ್ಪ, ಪ್ರಮುಖರಾದ ಸೂಗೂರು ಪರಮೇಶ್, ಎಂ.ಮಂಜುನಾಥ್, ಎಂ.ಆರ್. ಶಿವಕುಮಾರ್, ಕಾಶೀಪುರ ಗೋವಿಂದ, ಶೇಷಪ್ಪ, ಪುಟ್ಟರಾಜ್, ಆನಂದ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.