ಶಿವಮೊಗ್ಗ: ಪಾಶ್ಚತ್ಯೀಕರಣ ಅನುಕರಣೆಯಿಂದ ಭಾರತೀಯರ ಕುಟುಂಬ ವ್ಯವಸ್ಥೆ ಹಾಳಾಗುತ್ತಿದ್ದು ನಾವು ಮಾನಸಿಕ ನೆಮ್ಮದಿ ಕಳೆದುಕೊಂಡಿರುವುದಕ್ಕೆ ಪುರ್ವಜರ ಮಾರ್ಗವನ್ನು ಬಿಟ್ಟಿರುವುದೇ ಕಾರಣ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಕಳವಳ ವ್ಯಕ್ತಪಡಿಸಿದರು.
ನಗರದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ಬ್ರಾಹ್ಮಣ ಸಂಘಟನೆಗಳಿಂದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೇದಗಳಲ್ಲಿ ಇನ್ನೂ ಸನಾತನ ಹಿಂದು ಧರ್ಮ ಉಳಿದಿದೆ ಎಂದರೆ ಅದಕ್ಕೆ ವಿಪ್ರರು ಕಾರಣ ಎಂಬುದನ್ನು ಮರೆಯಬಾರದು ಎಂದರು.
ಬೆಂಗಳೂರು, ಶಿರಸಿ ಬಳಿಕ ಮೂರನೇ ಕಾರ್ಯಕಾರಣಿ ಸಭೆ ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದಿದೆ. ಹಲವು ಸಂಘಟನೆಗಳು ಬಲಗೊಂಡರೂ ಬ್ರಾಹ್ಮಣ ಸಂಘಟನೆ ಮಾತ್ರ ಬಲಗೊಳ್ಳಲಿಲ್ಲ. ರಾಜಕೀಯವಾಗಿ ಪ್ರಬಲರಾಗಲಿಲ್ಲ ಎಂಬ ಕೊರಗು ಇನ್ನೂ ನಮ್ಮನ್ನು ಕಾಡುತ್ತಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಬಹುತ್ವಕ್ಕೆ ಬೆಲೆ ಹೆಚ್ಚು. ಬಹುಮತದಲ್ಲಿ ಸಮರ್ಥರಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಅಭಿಪ್ರಾಯ ಒಟ್ಟಿಗೆ ಹೋಗುವುದಿಲ್ಲ. ಆದರೆ ಬ್ರಾಹ್ಮಣರಲ್ಲಿ ಸಾಮಾಜಿಕ ಹಿತಾಸಕ್ತಿ ಕಾಯ್ದುಕೊಂಡು ಬರಲಾಗಿದೆ. ಕ್ರೌರ್ಯದ ಆಧಾರದ ಮೇಲೆ ಯಾರು ನಿಂತಿರುತ್ತಾರೋ ಅವರಲ್ಲಿ ಕ್ರೌರ್ಯ ಬೆಳೆದಿರುತ್ತದೆಯೋ ವಿನಃ ಸಜ್ಜನಿಕೆಯಲ್ಲ ಎಂದು ಹೇಳಿದರು.
ಐವರು ಸಾಧಕರಿಗೆ ವಿಪ್ರಶ್ರೀ ಪುರಸ್ಕಾರ: ವಿವಿಧ ಕ್ಷೇತ್ರಗಳ ಸಾಧಕರಾದ ಹಿರಿಯ ಸಂಶೋಧಕ ಅ.ಸುಂದರ, ಯೋಗಾಚಾರ್ಯ ಡಾ. ಭ.ಮ.ಶ್ರೀಕಂಠ, ಧಾರ್ಮಿಕ ಚಿಂತಕ ಆ.ಪ.ರಾಮಭಟ್ಟ, ಆಯುರ್ವೇದ ವೈದ್ಯ ಡಾ. ಕೆ.ಸುರೇಶ್, ಸೌಂದರ್ಯ ಲಹರಿ ಪ್ರಶಿಕ್ಷಕಿ ರಾಜಲಕ್ಷ್ಮೀ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಎಂಎಲ್ಸಿ ಎಂ.ಬಿ.ಭಾನುಪ್ರಕಾಶ್, ಮುಖಂಡರಾದ ಎಸ್.ದತ್ತಾತ್ರಿ, ಡಾ. ಪವಿತ್ರಾ ಇದ್ದರು.