ನ್ಯೂಸ್

ಸೂಡಾದಿಂದ ಅನಧಿಕೃತ ಲೇಔಟ್ ತೆರವು

Shivamogga

ಶಿವಮೊಗ್ಗ: ನಗರದ ಹೊರವಲಯದ ಸೂಳೆಬೈಲ್‌ನಲ್ಲಿ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದ ಲೇಔಟ್ ಅನ್ನು ಸೂಡಾ (ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ)ದ ಅಧಿಕಾರಿಗಳು ಶನಿವಾರ ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಿದರು.

ಇಲ್ಲಿನ ಸರ್ವೆ ನಂಬರ್ 95ರಲ್ಲಿ ಕಂದಾಯ ಜಾಗವನ್ನು ಚನ್ನಗಿರಿ ಮೂಲದ ವ್ಯಕ್ತಿಯೊಬ್ಬರು ಸೂಡಾದಿಂದ ಅನುಮತಿ ಪಡೆಯದೆ ಲೇಔಟ್ ನಿರ್ಮಾಣ ಮಾಡಿದ್ದರು. ಬಾಕ್ಸ್ ಡ್ರೈನೇಜ್ ನಿರ್ಮಿಸಿ ಜನರಿಗೆ ನಿವೇಶನ ಮಾರಾಟಕ್ಕೆ ಮುಂದಾಗಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಸೂಡಾ ಅಧಿಕಾರಿಗಳು, ಅಕ್ರಮವಾಗಿ ಲೇಔಟ್ ನಿರ್ಮಿಸಿರುವುದು ದೃಢಪಟ್ಟಿತ್ತು. ಆ ಹಿನ್ನಲೆಯಲ್ಲಿ ಲೇಔಟ್ ನಿರ್ಮಿಸಿದವರಿಗೆ ನೋಟಿಸ್ ಜಾರಿ ಮಾಡಿದ್ದ ಅಧಿಕಾರಿಗಳು, ಶನಿವಾರ ಲೇಔಟ್ ತೆರವು ಕಾರ್ಯಾಚರಣೆ ನಡೆಸಿದರು.

ಈ ವೇಳೆ ನಗರ ಯೋಜಕ ಪ್ರಜ್ವಲ್, ಎಇಇ ಬಾಲರಾಜ್, ಎಇ ಗಂಗಾಧರ ಸ್ವಾಮಿ, ಸರ್ವೇಯರ್ ವೇಣು ಇದ್ದರು.

ಅನಧಿಕೃತವಾಗಿ ಲೇಔಟ್ ರಚನೆ ಮಾಡಿರುವ ವಿಷಯ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಸಭೆಯಲ್ಲಿಯೂ ಚರ್ಚೆಯಾಗಿ ಅನುಮತಿ ಪಡೆಯದೆ ರಚಿಸಿದ್ದ ಲೇಔಟ್ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ತೆರವುಗೊಳಿಸಲಾಗಿದೆ ಎಂದು ಸೂಡಾ ನಗರ ಯೋಜನಾ ನಿರ್ದೇಶಕ ಎಚ್.ಆರ್.ಶಂಕರ್ ತಿಳಿಸಿದರು.