ನ್ಯೂಸ್

ವಠಾರೆ ಹಟಾವೋ ಶಿವಮೊಗ್ಗ ಬಚಾವೋ

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡನೇ ಹಂತದಲ್ಲಿ ನಡೆದಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆಯಾಗಿದ್ದು ಸಮಗ್ರ ತನಿಖೆಗೆ ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣೆ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಿಂದ ಕಾನ್ವೆಂಟ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ಕಳಪೆ ಕಾಮಗಾರಿಯಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಗೋಪಾಲ ಗೌಡ ಬಡಾವಣೆಯಲ್ಲಿ ಕಳಪೆ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಸ್ಮಾರ್ಟ್‌ಸಿಟಿ ಎಂಡಿ ಚಿದಾನಂದ ವಠಾರೆ ಅವರ ಗಮನಕ್ಕೆ ತಂದರೂ ಕಳಪೆ ಎಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಕಿಡಿಕಾರಿದರು. ಜತೆಗೆ ವಠಾರೆ ಹಟಾವೋ ಶಿವಮೊಗ್ಗ ಬಚಾವೋ ಎಂದು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಮಾತನಾಡಿ, ಡಿವಿಎಸ್ ಮತ್ತು ಕಾನ್ವೆಂಟ್ ರಸ್ತೆ ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಯಾಗಿ ಕೇವಲ ಎರಡು ತಿಂಗಳಲ್ಲಿ ಸಂಪೂರ್ಣ ಹಾಳಾಗಿದೆ. ಈ ರಸ್ತೆಗೆ ಹಾಕಿದ್ದ ಸೀಲ್ ಕೋಟ್ ಸಂಪೂರ್ಣ ಕಿತ್ತುಹೋಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವಾಗಿದೆ ಎಂದು ದೂರಿದರು.

ಸ್ಮಾಟ್‌ಸಿಟಿ ಎಂ.ಡಿ.ಚಿದಾನಂದ ವಠಾರೆ ಅವರು ಮೊನ್ನೆ ಗೋಪಾಳದ ಕಳಪೆ ಕಾಮಗಾರಿ ವಸ್ತುಸ್ಥಿತಿ ಒಪ್ಪಿಕೊಳ್ಳದ ಕಾರಣ ಅವರ ಮೇಲಿನ ನಂಬಿಕೆ ಉಳಿದಿಲ್ಲ, ಹಾಗಾಗಿ ಕಾಮಗಾರಿಯ ಇಲ್ಲಿಯವರೆಗಿನ ದಾಖಲೆಗಳನ್ನು (ಎಂಬಿ ರಿಜಿಸ್ಟರ್ ಸೇರಿ) ತಮ್ಮ ವಶಕ್ಕೆ ಪಡೆಯಬೇಕು. ಸ್ವತಂತ್ರ ಏಜೆನ್ಸಿಯಿಂದ ತನಿಖೆಯಾಗಬೇಕು. ಕಳಪೆ ಕಾಮಗಾರರಿಗೆ ಜವಾಬ್ದಾರರಾದ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಈ ಕಾಮಗಾರಿಯಿಂದ ಉಂಟಾದ ಆರ್ಥಿಕ ನಷ್ಟ ಮತ್ತು ರಾಷ್ಟ್ರೀಯ ಸಂಪನ್ಮೂಲಗಳ ನಷ್ಟಗಳನ್ನು ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಕ್ಕೂಟ ಪ್ರಮುಖರಾದ ಡಾ. ಸತೀಶ್‌ಕುಮಾರ್ ಶೆಟ್ಟಿ, ಅಶೋಕಕುಮಾರ್, ಸುಬ್ಬಣ್ಣ, ಚನ್ನವೀರಪ್ಪ ಗಾಮನಗಟ್ಟಿ, ಸೀತಾರಾಮ್, ಜನಾರ್ದನ್ ಪೈ, ನಾಗೇಶ್, ನಾಗರಾಜ್, ಶೆಟ್ಟರ್, ಮನೋಹರ ಗೌಡ ಇದ್ದರು.