ನ್ಯೂಸ್

ಸ್ಮಾರ್ಟ್‌ಸಿಟಿ ಅಧಿಕಾರಿಗಳ ಮುಂದುವರಿಸಬೇಡಿ: ಪಾಲಿಕೆ ಸದಸ್ಯ ಯೋಗೇಶ್ ಆಗ್ರಹ

ಶಿವಮೊಗ್ಗ: ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ ಮೂವರನ್ನು ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್ ಸೇವೆಯಲ್ಲಿ ಮುಂದುವರಿಸುವ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆದು ಹೊಸಬರಿಗೆ ಅವಕಾಶ ಕಲ್ಪಿಸುವಂತೆ ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಒತ್ತಾಯಿಸಿದರು.

ಜುಲೈನಲ್ಲಿ ನಿವೃತ್ತಿ ಹೊಂದಲಿರುವ ಸಿವಿಲ್ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್‌ಕುಮಾರ್, ಲೆಕ್ಕಾಧಿಕಾರಿ ತಿಮ್ಮಪ್ಪ ಹಾಗೂ ಎಜಿಎಂ(ಅಡ್ಮಿನ್) ಹುದ್ದೆಯಿಂದ ಕಳೆದ 5 ವರ್ಷಗಳ ಹಿಂದೆಯೇ ನಿವೃತ್ತರಾಗಿರುವ ರತ್ನಾಕರ್ ಅವರನ್ನು ಸೇವೆಯಲ್ಲಿ ಮುಂದುವರಿಸುವ ಕುರಿತು ಜೂ. 21ರಂದು ನಡೆದ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಒಳ್ಳೆಯ ನಿರ್ಧಾರವಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯ್‌ಕುಮಾರ್ ಅವರಿಗೆ ಸರ್ಕಾರಿ ವೇತನ 1.30 ಲಕ್ಷ ರೂ. ಇದೆ. ಇದೀಗ ಪಿಂಚಣಿ 60 ಸಾವಿರ ರೂ. ಮತ್ತು ಸ್ಮಾರ್ಟ್‌ಸಿಟಿಯಿಂದ 70 ಸಾವಿರ ರೂ. ಮಾಸಿಕ ವೇತನ ಪಡೆಯುತ್ತಿದ್ದಾರೆ. ತಿಮ್ಮಪ್ಪ ಅವರಿಗೆ ಮೂಲ ವೇತನ 72 ಸಾವಿರ ರೂ. ಇದ್ದರೆ, 40 ಸಾವಿರ ರೂ. ಪಿಂಚಣಿ ಮತ್ತು 51 ಸಾವಿರ ರೂ. ಸ್ಮಾರ್ಟ್‌ಸಿಟಿಯಿಂದ ಸಿಗುತ್ತಿದೆ. ರತ್ನಾಕರ್ ಅವರಿಗೆ 50 ಸಾವಿರ ರೂ. ಇದ್ದು 30 ಸಾವಿರ ರೂ. ಪಿಂಚಣಿ ಮತ್ತು ಸ್ಮಾರ್ಟ್‌ಸಿಟಿಯಿಂದ 70 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ ಎಂದರು.

ಕರ್ನಾಟಕ ಸಿವಿಲ್ ಸರ್ವಿಸ್ ರೂಲ್ಸ್‌ನ ಅನುಪಾತದಡಿ ಸರ್ಕಾರದ ಅಂಗಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಂಡರೆ ನಿವೃತ್ತಿ ತಿಂಗಳ ಹಣ ಮತ್ತು ಸರ್ಕಾರಿ ಸಂಸ್ಥೆಯ ವೇತನ ಸೇರಿ ನಿವೃತ್ತಿ ಹೊಂದಿದ ವ್ಯಕ್ತಿಯ ಕೊನೆಯ ತಿಂಗಳ ವೇತನಕ್ಕಿಂತ ಹೆಚ್ಚಿರಬಾರದು. ಆದರೆ ಈ ಮೂವರೂ ಹೆಚ್ಚಿಗೆ ವೇತನ ಪಡೆಯುತ್ತಿದ್ದಾರೆ. ಇದನ್ನು ಗಮನಿಸಿದರೆ ಸದ್ಯ ತೆಗೆದುಕೊಂಡಿರುವ ನಿರ್ಧಾರದಿಂದ ಸರ್ಕಾರಕ್ಕೆ ಮಾಸಿಕ ಲಕ್ಷಾಂತರ ರೂ. ಹೊರೆಯಾಗುತ್ತಿದೆ ಎಂದರು. ಪದವೀಧರರಾದ ಅನೂಪ್, ಪೂಜಾ, ಭೂಮಿಕಾ, ನಿಹಾರಿಕಾ ಮತ್ತು ಆದಿತ್ಯ ಇದ್ದರು.