ಶಿವಮೊಗ್ಗ: ಮನುಷ್ಯರು ಕಾಲಿಡಲಾರದಷ್ಟು ಕೆಸರು. ಮಣ್ಣಿನ ಗುಡ್ಡೆಗಳು, ಅಗೆದ ರಸ್ತೆ, ಚರಂಡಿಯ ಗಬ್ಬು ವಾಸನೆ, ಸೊಳ್ಳೆಗಳ ಕಾಟ, ಹಂದಿಗಳ ಓಡಾಟ, ಕುಡಿಯುವ ನೀರಿನ ಕೊಳೆವೆಗೂ ಕೆಸರಿನ ಕಾಟ ಇವೆಲ್ಲಾ ನರಕಸದೃಶ ಪರಿಸ್ಥಿತಿ ಕಂಡು ಬರುತ್ತಿರುವುದು ನಗರದ 30ನೇ ವಾರ್ಡ್‌ನಲ್ಲಿ.
ಮಳೆ ಜೋರಾಗಿ ಬಂದರೆ ಇಲ್ಲಿನವರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಕೊಳಚೆ ಪರಿಸ್ಥಿತಿ ಸಾಂಕ್ರಾಮಿಕ ರೋಗಕ್ಕೂ ಕಾರಣವಾಗಿದೆ. ರಸ್ತೆ ಅಗೆದು ಅದೆಷ್ಟೋ ತಿಂಗಳಾದರೂ ಮುಚ್ಚುವ ಕಾರ್ಯಕ್ಕೆ ಗುತ್ತಿಗೆದಾರರು ಮುಂದಾಗಿಲ್ಲ. ಪಾಲಿಕೆಯವರಿಗೆ ಜಾಣ ಕುರುಡು. ಅವ್ಯವಸ್ಥೆ ಸರಿಪಡಿಸುವ ಕಾಳಜಿ ಯಾರಿಗೂ ಇಲ್ಲವಾಗಿದೆ.
ರಸ್ತೆಯ ಒಳಚರಂಡಿಯ ವ್ಯವಸ್ಥೆಯಂತೂ ಗಬ್ಬೆದ್ದು ಹೋಗಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಶಾಲೆಗೆ ಹೋಗುವ ಮಕ್ಕಳು ಆಸ್ಪತ್ರೆಗೆ ಹೋಗುವ ರೋಗಿಗಳು, ಅಂಗಡಿ ಮುಂತಾದ ಸಣ್ಣ-ಪುಟ್ಟ ಕೆಲಸಗಳಿಗೆ ಮನೆಯಿಂದ ಹೊರ ಹೋಗುವವರು ತುಂಬಾ ಆತಂಕದಲ್ಲಿದ್ದಾರೆ. ಹಲವು ಹಿರಿಯರು ಬಿದ್ದು ಪೆಟ್ಟು ಮಾಡಿಕೊಂಡಿದ್ದಿದೆ. ವಾಹನಗಳ ಸಂಚಾರವಿರಲಿ, ಮನುಷ್ಯರು ಓಡಾಡುವುದೇ ಕಷ್ಟವಾಗಿದೆ.
ಎಲ್ಲಿ ನೋಡಿದರಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಅಗೆದ ಮಣ್ಣನ್ನು ರಸ್ತೆಯಲ್ಲೇ ಬಿಟ್ಟಿರುವುದರಿಂದ ಮನೆಯಿಂದ ಹೊರಬರಲು ಜನರು ಪರದಾಡಬೇಕಾಗಿದೆ. ಮನೆಯ ಮುಂದೆ ವಾಹನಗಳನ್ನು ನಿಲ್ಲಿಸಲು ಕೂಡ ಜಾಗವಿಲ್ಲವಾಗಿದೆ. ಈ ಬಗ್ಗೆ ಹಲವು ಬಾರಿ ಪಾಲಿಕೆಯ ಗಮನಕ್ಕೆ ತಂದಿದ್ದರೂ ಕೂಡ ಪ್ರಯೋಜನವಿಲ್ಲವಾಗಿದೆ ಎಂಬುದು ಸ್ಥಳೀಯರ ಅಳಲು.
ಈ ಹಿಂದೆ ಶಂಕರ್ ಗನ್ನಿ ಎಂಬುವವರು ಈ ವಾರ್ಡಿನ ಸದಸ್ಯರಾಗಿದ್ದರು. ಅವರ ಕಾಲದಲ್ಲಿಯೇ ಇಷ್ಟೇಲ್ಲಾ ಸಮಸ್ಯೆಗಳು ಉದ್ಭವವಾಗಿದ್ದವು. ಅದೆಷ್ಟೋಬಾರಿ ಜನರು ಅವರ ವಿರುದ್ಧ ರೊಚ್ಚಿಗೆದ್ದಿದ್ದರೂ ಅವರು ಜನಪರ ಕಾಳಜಿ ತೋರಲಿಲ್ಲ. ಈಗ ಸಮಸ್ಯೆ ಉಲ್ಬಣವಾಗಿದ್ದರೂ ಅವರು ಇತ್ತ ಮುಖ ಮಾಡಿಲ್ಲ.
ಶಾಸಕ ಎಸ್.ಎನ್.ಚನ್ನಬಸಪ್ಪ, ವರ್ಷದೊಳಗೆ ಮತ್ತೆ ವರ್ಗಾವಣೆಯಾಗಿ ಬಂದಿರುವ ಆಯುಕ್ತ ಮಾಯಣ್ಣ ಗೌಡ ಅವರಾದರೂ ಈ ಸಮಸ್ಯೆಗೆ ಮುಕ್ತಿ ನೀಡುತ್ತಾರೆಂಬ ನಿರೀಕ್ಷೆ ಇಲ್ಲಿನ ನಿವಾಸಿಗಳಲ್ಲಿದೆ. ಇದೇ ಸ್ಥಿತಿ ಮುಂದುವರಿದರೆ ಆಡಳಿತ ವ್ಯವಸ್ಥೆ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗೂ ಸ್ಥಳೀಯರು ಸಜ್ಜಾಗುತ್ತಿದ್ದಾರೆ.