ನ್ಯೂಸ್

ಕೆರೆಕಟ್ಟೆ ಉಳಿಸುವುದೇ ದೊಡ್ಡ ಯಜ್ಞಯಾಗ

ಶಿವಮೊಗ್ಗ: ಯಜ್ಞ ಯಾಗದಿಂದ ಮಳೆ ಬರುತ್ತದೆ ಎನ್ನುವುದು ಕಾಲ ದೂರವಾಗಿದೆ. ಅದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಮೊದಲೆಲ್ಲ ಕೃತಜ್ಞಾತಾ ಪೂರ್ವಕವಾಗಿ ಪಂಚಭೂತಗಳಿಗೆ ಯಜ್ಞಯಾಗ ಮಾಡುತ್ತಿದ್ದರು. ಆದರೆ ಈಗ ಕೆರೆ ಕಟ್ಟೆಗಳನ್ನು ಉಳಿಸುವುದೇ ದೊಡ್ಡ ಯಜ್ಞಯಾಗವಾಗಿದೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಬಿದರೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಎದುರಿನ ಶ್ರೀ ಸಾಯಿಬಾಬಾ ಮಂದಿರ ಬಳಿ ಭಾನುವಾರ ಸರ್ಜಿ ಫೌಂಡೇಶನ್, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ ನೂತನವಾಗಿ ನಿರ್ಮಿಸಿದ ಕೆರೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಮೊದಲೆಲ್ಲ ಪ್ರಜೆಗಳಿಗೆ, ಗುರುಗಳಿಗೆ, ತಂದೆ ತಾಯಿಗಳಿಗೆ ಕೃತಜ್ಞತೆಗಾಗಿ ಯಾಗವನ್ನು ಮಾಡುವ ಪದ್ಧತಿ ಇತ್ತು. ಈಗ ಭೂತ ಯಜ್ಞದ ಅವಶ್ಯವಿದ್ದು, ಭೂಮಿ, ಗಾಳಿ, ನೀರು, ಬೆಂಕಿ, ಬಯಲನ್ನು ಹಾಳು ಮಾಡದೇ ಇರುವುದು ಭೂತ ಯಜ್ಞ. ಪಂಚಭೂತಗಳನ್ನು ಸುಸ್ಥಿರವಾಗಿಡುವುದೇ ನಾವು ಮಾಡುವ ಯಜ್ಞ. ಕೆರೆಗಳಿಗೆ ಮರುಜೀವ ಕೊಟ್ಟರೆ ಅಪರೂಪದ ಆಸ್ತಿಯಾಗುತ್ತದೆ, ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಶಿವಮೊಗ್ಗಕ್ಕೆ ಪರಿಸರ ಪ್ರೆಮಿಗಳ ಕೊಡುಗೆ ಬಹು ದೊಡ್ಡದಿದೆ. ಪರೋಪಕಾರಂ ಇರಬಹುದು, ಪರ್ಯಾವರಣ ಟ್ರಸ್ಟ್, ಪರೋಪಕಾರಣ ಇರಬಹುದು, ಎಲ್ಲರೂ ಸೇರಿಕೊಂಡು ತುಂಬಾ ಪರಿಸರ ಪೂರಕ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಎಂಎಲ್‌ಸಿ ಡಿ.ಎಸ್.ಅರುಣ್, ಪರಿಸರ ಪ್ರೇಮಿಗಳಾದ ಪ್ರೊ. ಬಿ.ಎಂ.ಕುಮಾರಸ್ವಾಮಿ, ತ್ಯಾಗರಾಜ್ ಮಿತ್ಯಾಂತ, ಬಾಲುನಾಯ್ಡು, ಮಾಜಿ ನಗರ ಸಭಾಧ್ಯಕ್ಷ ಎಂ.ಶಂಕರ್, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೊತಿಪ್ರಕಾಶ್, ವಕೀಲ ಅಶೋಕ್‌ಭಟ್, ಡಾ. ಬಾಲಕೃಷ್ಣ ಹೆಗಡೆ, ದಿನೇಶ್, ರಮೇಶ್ ಹೆಗಡೆ ಹಾಗೂ ಸಾಯಿಬಾಬಾ ಮಂದಿರದ ಸಮಿತಿ ಪ್ರಮುಖರು, ಪದಾಧಿಕಾರಿಗಳು ಹಾಜರಿದ್ದರು.

ಹತ್ತೇ ದಿನದಲ್ಲಿ ಕೆರೆ ನಿರ್ಮಿಸಿ ಉದ್ಘಾಟನೆ: ಶಿವಮೊಗ್ಗದ ಸರ್ಜಿ ಫೌಂಡೇಶನ್, ಉತ್ತಿಷ್ಠ ಭಾರತ ಮಲೆನಾಡು, ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ, ಪರಿಸರಾಸಕ್ತರ ನೆರವಿನಿಂದ ಕೇವಲ ಹತ್ತೇ ದಿನದಲ್ಲಿ ಬಿದರೆ ಬಳಿ ನೂತನವಾಗಿ ಕೆರೆ ನಿರ್ಮಿಸಿ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಡಾ. ಧನಂಜಯ ಸರ್ಜಿ ಮತ್ತು ನಮಿತಾ ಸರ್ಜಿ ದಂಪತಿ ನೀರನ್ನು ಕೆರೆಗೆ ಸಮರ್ಪಿಸುವ ಮೂಲಕ ಕೆರೆ ಉದ್ಘಾಟಿಸಿದರು. ರಂಗಭೂಮಿ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಯೇಸು ಪ್ರಕಾಶ್ ಅವರಿಗೆ ಸರ್ಜಿ ಫೌಂಡೇಶನ್‌ನಿಂದ ಸನ್ಮಾನಿಸಲಾಯಿತು.