ಶಿವಮೊಗ್ಗ: ಭಗವತಿಯ ಅನುಗ್ರಹದಿಂದಲೇ ಜಗತ್ತಿನಲ್ಲಿ ಸತ್ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ದೇವರ ಶಕ್ತಿಯ ಅರಿವು ಹೊಂದುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳುವ ಚಿಂತನೆ ನಡೆಸಬೇಕು ಎಂದು ಮಾಗಡಿ ಮತ್ತು ಬೆಂಗಳೂರು ಪೋಲೋಹಳ್ಳಿಯ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷೆ ಶ್ರೀ ಮಾತಾಜಿ ವಿವೇಕಮಯಿ ಹೇಳಿದರು.
ಸೋಮಿನಕೊಪ್ಪ ಕೆಎಚ್‌ಬಿ ಪ್ರೆಸ್ ಕಾಲನಿಯ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಶರನ್ನವರಾತ್ರಿ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಎಲ್ಲ ಆಗುಹೋಗುಗಳಿಗೆ ಭಗವಂತನೇ ಕಾರಣ. ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹಾತ್ಮರು ದೇವರ ಶಕ್ತಿ, ಇರುವಿಕೆಯ ಸತ್ಯವನ್ನು ಮೌಲ್ಯಯುತ ಸಂದೇಶಗಳ ಮೂಲಕ ನೀಡಿದ್ದಾರೆ. ಪ್ರತಿಯೊಬ್ಬರೂ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
ಸಮಾಜಸೇವೆಗೆ ವಿಶೇಷ ಮಾನ್ಯತೆ ಇದೆ. ಸೇವೆಯಿಂದ ಜೀವನದಲ್ಲಿ ನೆಮ್ಮದಿ ಪಡೆಯುವ ಜತೆಗೆ ಬದುಕು ಅರ್ಥಪೂರ್ಣವಾಗುತ್ತದೆ. ಕಲಬುರಗಿಯ ಹಣಮಂತ ದೇವನೂರ ಅವರ ಸೇವೆ ಹಿರಿದು. ಇಂಥವರ ಕಾರ್ಯ ಎಲ್ಲರಿಗೂ ಆದರ್ಶ, ಪ್ರೇರಣೆಯಾಗಿದೆ. ಸತ್ಕಾರ್ಯಗಳನ್ನು ಗುರುತಿಸಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಕುಷ್ಠ ರೋಗಿಗಳಿಗೆ ವಿಶೇಷ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಪಡೆದ ಹಣಮಂತ ದೇವನೂರ ಮಾತನಾಡಿ, ನನ್ನ ಸಣ್ಣ ಸೇವೆ ಗುರುತಿಸಿ ಇಂತಹ ದೊಡ್ಡ ಪುರಸ್ಕಾರ ಮತ್ತು ಗೌರವ ನೀಡಿರುವುದು ಸಂತಸ ತಂದಿದೆ. ದೇವಿಯ ಅನುಗ್ರಹದಿಂದ ನಾನು ಈ ಪ್ರಶಸ್ತಿಗೆ ಭಾಜನನಾಗಿದ್ದೇನೆ. ಇದರಿಂದ ನನ್ನ ಸೇವೆಗೆ ಇನ್ನಷ್ಟು ಪ್ರೇರಣೆ ದೊರೆತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ದೊಡ್ಡಮ್ಮ ದೇವಿ ಉಪಾಸಕ ಸಿದ್ದಪ್ಪಾಜಿ ಮಾತನಾಡಿ, ಭಗವತಿಯ ಅನುಗ್ರಹದಿಂದ ಸಾಮಾನ್ಯರೂ ಮಹಾನ್ ವ್ಯಕ್ತಿಯಾಗಿ ಇತಿಹಾಸ ಪುರುಷರಾದ ಉದಾಹರಣೆಗಳು ಸಾಕಷ್ಟಿವೆ ಎಂದರು. ಹಣಮಂತ ದೇವನೂರ ಅವರಿಗೆ ಶ್ರೀ ದೊಡ್ಡಮ್ಮದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಹಾಗೂ ಸೌಂದರ್ಯ ಲಹರಿ ಉಪಾಸಕರಾದ ಕಾಮಾಕ್ಷಮ್ಮ ಅವರಿಗೆ ಶ್ರೀ ಲಲಿತಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹೊಸಕೋಟೆ ಶ್ರೀ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ಬ್ರಹ್ಮಮಯಿ, ಶ್ರೀ ಚೈತನ್ಯಮಯಿ ಮಾತಾಜಿ, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಲೇಖಕಿ ಆಪ್ತಿ ಪಟವರ್ಧನ್ ಅವರನ್ನು ಸನ್ಮಾನಿಸಲಾಯಿತು. ಯೋಗಾಚಾರ್ಯ ರುದ್ರಾರಾಧ್ಯ , ಚನ್ನಪಟ್ಟಣದ ಮಾತಾ ಶ್ರೀ ಶಾರದಾಶ್ರಮದ ಮಾತಾಜಿ ಜ್ಯೋತ್ಸ್ನಮಯಿ ಇತರರಿದ್ದರು. ಆರ್ಟ್ ಆ್ ಲಿವಿಂಗ್ ತರಬೇತುದಾರ ಶಬರೀಶ್ ಕಣ್ಣನ್ ಅವರಿಂದ ಭಜನೆ ನಡೆಯಿತು.