ನ್ಯೂಸ್

ಎನ್.ಡಿ.ಸುಂದರೇಶ್ ಕೆಚ್ಚೆದೆಯ ರೈತ ನಾಯಕ

ಶಿವಮೊಗ್ಗ: ಸಮಾಜದವಾದದ ತಳಹದಿಯಲ್ಲಿ ಚಿಂತನ ಮಂಥನ ಮಾಡುತ್ತಿದ್ದ ಧೀಮಂತ ರೈತ ನಾಯಕ ಎನ್.ಡಿ.ಸುಂದರೇಶ್ ಅವರು ರಾಜ್ಯ ರೈತ ಸಂಘ ಸ್ಥಾಪಿಸುವ ಮೂಲಕ ರೈತಪರ ಚಳುವಳಿಯೆಂಬ ಬೀಜ ಭಿತ್ತಿ ಮೊಳಕೆಯೊಡೆದು ಬೆಳೆಯುವಂತೆ ಮಾಡಿದರೆಂದು ಕಮಲಾ ನೆಹರು ಕಾಲೇಜಿನ ನಿವೃತ್ತ ಪ್ರಾಚಾರ್ಯ, ಕವಿ ಪ್ರೊ. ಸತ್ಯನಾರಾಯಣ ಬಣ್ಣಿಸಿದರು.

ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರ ಸಾಹಿತ್ಯ ಗ್ರಾಮದಲ್ಲಿ ಬುಧವಾರ ಎನ್.ಡಿ.ಸುಂದರೇನ್ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಾಜ್ಯ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ಜನ್ಮದಿನೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಹಾಗೂ ಎನ್.ಡಿ.ಸುಂದರೇಶ್ ಅವರ ಕೃಷಿ ಬದುಕು ಮತ್ತು ರೈತ ಹೋರಾಟ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಎನ್.ಡಿ.ಸುಂದರೇಶ್ ಕೆಚ್ಚೆದೆಯ ರೈತ ನಾಯಕ. ನಾನು ಸರ್ಕಾರಿ ನೌಕರನಾಗಿದ್ದರೂ ಆ ದಿನಗಳಲ್ಲೇ ರೈತ ಹೋರಾಟ, ರೈತಪರ ಕಾಳಜಿಯಿಂದ ಅವರ ಅಭಿಮಾನಿಯಾಗಿದ್ದೆ. ಇಡೀ ರಾಜ್ಯದಲ್ಲಿ ಹಸಿರು ಶಾಲಿಗೆ ಶಕ್ತಿ ತಂದುಕೊಟ್ಟಿದ್ದ ಅವರು ರಾಜ್ಯ ಸರ್ಕಾರಕ್ಕಿಟ್ಟದ್ದ 19 ಬೇಡಿಕೆಗಳಲ್ಲಿ 14 ಬೇಡಿಕೆ ಈಡೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಪುಸಕ್ತ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಂಗಳೂರಿನ ಹಿರಿಯ ಪತ್ರಕರ್ತೆ ಎಚ್.ಜಿ.ಶೋಭಾ, ಎನ್.ಡಿ.ಸುಂದರೇಶ್ ಅವರ ಜೀವನ ಚರಿತ್ರೆ, ಹೋರಾಟದ ಬಗ್ಗೆ ಅರಿವು ಮೂಡಿಸಬೇಕಿದೆ. ಶಾಲಾ ಕಾಲೇಜುಗಳಲ್ಲಿ ಅವರ ಬಗ್ಗೆ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಬೇಕಿದೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಸುಂದರೇಶ್, ಶಿಕ್ಷಣ ಸಂಯೋಜಕ ಡಾ. ಬಸವರಾಜ ಮಲ್ಲಪ್ಪ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಎನ್.ಎಸ್.ಸುಧಾಂಶು, ನಿವೃತ್ತ ಪ್ರಾಧ್ಯಾಪಕಿ ಕಿರಣ್ ದೇಸಾಯಿ ಉಪಸ್ಥಿತರಿದ್ದರು.