ಶಿವಮೊಗ್ಗ: ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸುವ ಸಂಬಂಧ ಆ.12ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಎದುರು ವಿನೂತನವಾಗಿ ‘ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯ’ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ರಾಜಕಾರಣಿಗಳು, ಕೈಗಾರಿಕೆಗಳ ಮಾಲೀಕರು, ವರ್ತಕರು, ನೌಕರಶಾಹಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ರೈತ ಮಾತ್ರ ಅಗ್ಗದ ದರದಲ್ಲಿ ಅವರಿಗೆಲ್ಲ ಅಗತ್ಯತೆ ಪೂರೈಸಿ, ಸಾಲದ ಸುಳಿಗೆ ಸಿಲುಕುತ್ತಿದ್ದಾನೆ. ರೈತರಿಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿಲ್ಲ. ಹಾಗಾಗಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಲೆಂಬ ನಿಟ್ಟಿನಲ್ಲಿ ಬೆಲೆ ಸ್ವಾತಂತ್ರ್ಯ ಚಳವಳಿ ಆರಂಭಿಸಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ವಾಮಿನಾಥನ್ ವರದಿ ಅಥವಾ ಕೃಷಿ ಬೆಲೆ ಆಯೋಗದ ವರದಿಯಂತೆ ವೈಜ್ಞಾನಿಕ ಬೆಲೆ ನೀಡಬೇಕು. ಪ್ರತಿ ಕ್ವಿಂಟಲ್ ಭತ್ತಕ್ಕೆ 3 ಸಾವಿರ ರೂ. ನೀಡಬೇಕಿದೆ. ಆದರೆ ರೈತರಿಗೆ ಹಾಲಿ 1,500 ರೂ. ಮಾತ್ರ ಸಿಗುತ್ತಿದೆ. ಇದರಿಂದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆ ಕಾರಣದಿಂದ ಚಳವಳಿ ಆರಂಭಿಸಲು ನಿರ್ಧರಿಸಿದ್ದೇವೆ. ಸಾಲ ಕೊಟ್ಟ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡುವುದಿಲ್ಲ. ಅದರ ಬದಲು ಬೆಳೆಗಳನ್ನೇ ಅವರಿಗೆ ನೀಡುತ್ತೇವೆ. ಬ್ಯಾಂಕ್‌ನವರೇ ಉತ್ಪನ್ನಗಳನ್ನು ಮಾರಾಟ ಮಾಡಿ ಸಾಲಕ್ಕೆ ಜಮಾ ಮಾಡಿಕೊಳ್ಳಲಿ ಅಥವಾ ಅದು ಸಾಧ್ಯವಾಗದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಲಿ ಎಂದು ಹೇಳಿದರು.