ನ್ಯೂಸ್

ಕೌಶಲಾಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ: ಜಿ.ಅನುರಾಧಾ

ಶಿವಮೊಗ್ಗ: ಕೇಂದ್ರ ಸರ್ಕಾರ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮಹಿಳೆಯರು ಸೇರಿದಂತೆ ಕೌಶಲನಿರತರು ಸಮರ್ಥವಾಗಿ ಬಳಸಿಕೊಂಡರೆ ಯೋಜನೆ ಫಲಪ್ರದವಾಗಲು ಸಾಧ್ಯ ಎಂದು ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧಾ ಅಭಿಪ್ರಾಯಪಟ್ಟರು.

ನಗರದ ಜನಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಶನಿವಾರ ವಿವಿಧ ಕೌಶಲ ತರಬೇತಿ ಮತ್ತು ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಕೌಶಲ ಬಹಳ ಮಹತ್ವವಾಗಿದೆ. ಕೇವಲ ಪದವಿ ಮಾತ್ರವಲ್ಲ, ನಮ್ಮಲ್ಲಿರುವ ಚಾಕಚಕ್ಯತೆ, ಕೌಶಲ, ಚತುರತೆಯನ್ನು ಹೊರಗೆಡವಲು ವೇದಿಕೆ ಬಹಳ ಮುಖ್ಯವಾಗಿದೆ. ಈ ವೇದಿಕೆಯನ್ನು ಜನಶಿಕ್ಷಣ ಸಂಸ್ಥೆ ಒದಗಿಸುತ್ತಿದೆ ಎಂದರು.

ನಾನು ಕೇವಲ ಓದಿ ಪದವಿ ಪಡೆಯಬೇಕೆಂಬ ನಿಟ್ಟಿನಲ್ಲಿ ಮಹಿಳೆಯರು ಯೋಚಿಸದೇ ಕೌಶಲತೆಯನ್ನು ಸಮರ್ಥವಾಗಿ ಬಳಸಿಕೊಂಡು ಈ ಮೂಲಕ ತಮ್ಮತನವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು. ಕೌಶಲವಿದ್ದು ಕೂಡ ಹಲವರು ವೇತನದಲ್ಲಿ ತಾರತಮ್ಯ ಕಾಣುವಂತಾಗಿದೆ. ಹೀಗಾಗಿ ನುರಿತವರಿಗೆ ತರಬೇತಿ ಮತ್ತು ನಿರ್ದಿಷ್ಟವಾದ ಸಂಸ್ಥೆ ಮೂಲಕ ಪ್ರಮಾಣಪತ್ರ ನೀಡಿದಾಗ ಕೌಶಲದ ಮೂಲಕ ಜೀವನದ ಏಳಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಜೆಎಸ್‌ಎಸ್ ಆಡಳಿತ ಮಂಡಳಿ ಸದಸ್ಯೆ ಸೌಮ್ಯಾ ಗುರುರಾಜ್, ಅಧ್ಯಕ್ಷತೆ ವಹಿಸಿದ್ದ ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮಾತನಾಡಿದರು. ವಿವಿಧ ಕೌಶಲ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡುವ ಮೂಲಕ ಅಭಿನಂದಿಸಲಾಯಿತು. ಜನಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ಎಸ್.ಬಿ.ಕಮಲಾಕರ್, ಜೆಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸುಮನಾ ಉಪಸ್ಥಿತರಿದ್ದರು.