ನ್ಯೂಸ್

ಕಾನೂನುಬಾಹಿರ ಚಟುವಟಿಕೆಗಳಿಲ್ಲ ಅವಕಾಶ; ಎಸ್ಪಿ ಮಿಥುನ್‌ಕುಮಾರ್ ಎಚ್ಚರಿಕೆ

Shivamogga

ಶಿವಮೊಗ್ಗ: ಶಿವಮೊಗ್ಗ ಸೃಜನಶೀಲ ಜಿಲ್ಲೆಯಾಗಿದ್ದು ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇಂತಹ ಸುಸಂಸ್ಕೃತ ಜಿಲ್ಲೆಯಲ್ಲಿ ಕಾನೂನುಬಾಹಿರ ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಕುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ನೂತನ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸ್ಪಷ್ಟಪಡಿಸಿದರು.

ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಅವಕಾಶ, ಸಮಸ್ಯೆಗಳ ಕುರಿತಂತೆ ಶೀಘ್ರವೇ ಅಧ್ಯಯನ ನಡೆಸುತ್ತೇನೆ. ಆನಂತರ ಆದ್ಯತೆಗೆ ಅನುಗುಣವಾಗಿ ಏನೇನು ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದರು.

ಐತಿಹಾಸಿಕ ಜಿಲ್ಲೆ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದ್ದು ಕಾನೂನು-ಸುವ್ಯವಸ್ಥೆ ಪರಿಪಾಲನೆಯಲ್ಲಿ ಜನತೆಯ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

ಪೊಲೀಸ್ ಇಲಾಖೆ ಜನತೆ ಸೇವೆಗೆ ಸದಾ ಸಿದ್ಧವಾಗಿರಲಿದೆ. ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ಹಿಂದಿನ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರಿಂದ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.