ನ್ಯೂಸ್

ಶಿವಮೊಗ್ಗದಲ್ಲಿ ವಿಶ್ರಾಂತಿ ಪಡೆದ ರಾಜ್ಯಪಾಲ

ಶಿವಮೊಗ್ಗ: ದಾವಣಗೆರೆ ಮತ್ತು ಕಾರವಾರ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಸೋಮವಾರ ಬೆಳಗ್ಗೆ ಮಾರ್ಗಮಧ್ಯೆ ಶಿವಮೊಗ್ಗದಲ್ಲಿ ಸುಮಾರು ಅರ್ಧ ಗಂಟೆ ವಿಶ್ರಾಂತಿ ಪಡೆದರು. ಕಾರವಾರದ ನೌಕಾ ಸೇನಾ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಅವರು ಪೂರ್ವ ನಿಗದಿಯಂತೆ ನಗರದ ಪ್ರವಾಸಿ ಮಂದಿರದ ಹೆಲಿಪ್ಯಾಡ್‌ಗೆ ಬಂದಿಳಿದರು.

ಶಾಸಕ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಡಾ. ವಿಕ್ರಂ ಆಮ್ಟೆ, ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಸೇರಿ ಅಧಿಕಾರಿಗಳು ರಾಜ್ಯಪಾಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಸಾಮಾನ್ಯವಾಗಿ ಸಿಎಂ ಸೇರಿದಂತೆ ಗಣ್ಯರು ಹೆಲಿಪ್ಯಾಡ್‌ಗೆ ಬಂದಿಳಿದ ಬಳಿಕ ಸರ್ಕಾರಿ ವಾಹನಗಳಲ್ಲಿ ಪ್ರವಾಸಿ ಮಂದಿರಕ್ಕೆ ತೆರಳುವುದು ಸಾಮಾನ್ಯ. ಆದರೆ ಹೆಲಿಕಾಪ್ಟರ್‌ನಿಂದ ಇಳಿದ ಗೆಹಲೋತ್ ಅವರು ಶಾಸಕ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ನಡೆದುಕೊಂಡೇ ಪ್ರವಾಸಿ ಮಂದಿರಕ್ಕೆ ತೆರಳಿದರು. ಅರ್ಧ ಗಂಟೆ ವಿಶ್ರಾಂತಿ ಬಳಿಕ ಮತ್ತೆ ಸಾಗರ ಮುಖ್ಯ ರಸ್ತೆವರೆಗೆ ಬಂದರು. ಆನಂತರ ಹೆಲಿಪ್ಯಾಡ್‌ಗೆ ತೆರಳಿದರು. ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.