ಶಿವಮೊಗ್ಗ: ನಮ್ಮ ನಡಿಗೆ ಶಾಂತಿ ಕಡೆಗೆ ತಂಡದಿಂದ ಸಬ್ ಕೋ ಸನ್ಮತಿ ದೇ ಭಗವಾನ್ ಧ್ಯೇಯವಾಕ್ಯದಡಿ ಅಕ್ಟೋಬರ್ 2ರಂದು ಗಾಂಧಿಪಾರ್ಕ್‌ನಲ್ಲಿ ಗಾಂಧಿ ನೆನಪು ಕುರಿತು ಕಾರ್ಯಕ್ರಮ ಆಯೋಜಿಸಲಾಗಿದೆ.
ಮಹಾತ್ಮಗಾಂಧಿ ವಿಚಾರಗಳನ್ನು ಪ್ರಪಂಚವೇ ಒಪ್ಪಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿಯೇ ಅಪಸ್ವರಗಳು ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಉಳಿಸುವ ಸಲುವಾಗಿ ರಾಜ್ಯದ 114 ತಾಲೂಕುಗಳಲ್ಲಿ ಏಕಕಾಲದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ ಎಂದು ಬುಧವಾರ ಪ್ರಗತಿಪರ ಚಿಂತಕ ಕೆ.ಎಲ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಾಂಧಿ ಕುರಿತು ನೀನಾಸಂ ರಘುನಂದನ್ ಉಪನ್ಯಾಸ ನೀಡುವರು. ಬಳಿಕ ಸಹ ಭೋಜನವಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಸ್ಥಳೀಯ ಪ್ರಗತಿಪರರ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಸತ್ಯ, ಅಹಿಂಸೆ, ಗಾಂಧೀಜಿ ಅವರ ಮೂಲ ತತ್ವವಾಗಿತ್ತು. ಅದು ಇಂದು ಅಗತ್ಯವಾಗಿ ಬೇಕಾಗಿದೆ. ವರ್ತಮಾನದ ತಲ್ಲಣಗಳು ಬೇರೆ ಇವೆ. ಗಾಂಧೀಜಿ ಬಗ್ಗೆ ಅಪಸ್ವರ ಎತ್ತುವವರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಪ್ರೋತ್ಸಾಹಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಗಾಂಧೀಜಿ ಇಂದು ಅನಿವಾರ್ಯ ಮತ್ತು ಅಗತ್ಯವಾಗಿದ್ದಾರೆ. ಅವರು ಕೇವಲ ವ್ಯಕ್ತಿಯಲ್ಲ, ಒಂದು ಸಿದ್ಧಾಂತವೂ ಹೌದು. ಗಾಂಧಿಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಗಾಯಕ ಹುಮಾಯೂನ್ ಹರ್ಲಾಪುರ್ ಮತ್ತು ಜನಪದ ಗಾಯಕ ಕೆ.ಯುವರಾಜ್ ಗಾಂಧಿ ಕುರಿತ ಹಾಡುಗಳನ್ನು ಹಾಡುವರು ಎಂದರು.
ಸರ್ಜಿ ಫೌಂಡೇಷನ್‌ನ ಕಿರಣ್ ಮಾತನಾಡಿ, ಸರ್ಜಿ ಫೌಂಡೇಷನ್ ಗಾಂಧೀಜಿ ಕುರಿತಂತೆ ಮೈಕ್ರೋ ಫಿಲ್ಮ್ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಕಾರ್ಯಾಗಾರ ನಡೆಸಲಾಗಿದೆ. ಮೊಬೈಲ್ನಲ್ಲಿಯೇ ಎರಡು ನಿಮಿಷದೊಳಗೆ ಗಾಂಧಿ ಕುರಿತ ಕಿರುಚಿತ್ರಗಳನ್ನು ಮಾಡಬಹುದು. ಉತ್ತಮ ಕಿರುಚಿತ್ರ ಮಾಡಿದ 10 ಜನರಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.
ಪ್ರಮುಖರಾದ ಅನನ್ಯ ಶಿವಕುಮಾರ್, ಟಿ.ಎಚ್.ಹಾಲೇಶಪ್ಪ, ಹರಿಗೆ ರವಿ, ಅರಸಾಳು ಸುರೇಶ್, ರಮೇಶ್ ಚಿಕ್ಕಮರಡಿ ಸುದ್ದಿಗೋಷ್ಠಿಯಲ್ಲಿದ್ದರು.