ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಎಂಟು ತಿಂಗಳಿಂದ ಪರಿಸ್ಥಿತಿ ಸೂಕ್ಷ್ಮವಾಗಿದ್ದು ಮುಂಬರುವ ಗಣಪತಿ ಹಬ್ಬವನ್ನು ಜನತೆ ಅದ್ಧೂರಿಯಿಂದ ಆಚರಿಸಲು ಬೇಕಾದ ಎಲ್ಲ ಬಂದೋಬಸ್ತ್‌ನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ ಎಂದು ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ತಿಳಿಸಿದರು.
ಗಣಪತಿ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಈಗಾಗಲೇ ಇಬ್ಬರನ್ನು ಗಡಿಪಾರು ಮಾಡಲಾಗಿದೆ. ಇನ್ನೂ ಹಲವರನ್ನು ಗಡಿಪಾರು ಮಾಡಲು ಪಟ್ಟಿ ಸಿದ್ಧವಾಗಿದ್ದು ಶೀಘ್ರವೇ ಗಡಿಪಾರು ಆದೇಶ ಹೊರಬೀಳಲಿದೆ ಎಂದು ಶುಕ್ರವಾರ ಮೀಡಿಯಾ ಹೌಸ್ ಸಂವಾದದಲ್ಲಿ ಹೇಳಿದರು.
ಹಬ್ಬದ ಸಂದರ್ಭದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಹೊರಗಡೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತಿದೆ. ಸಾಗರ, ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ವಿವಿಧ ಸಂಘಸಂಸ್ಥೆಗಳು, ಧಾರ್ಮಿಕರ ಮುಖಂಡರ ಜತೆ ಶಾಂತಿಸಭೆಗಳನ್ನು ನಡೆಸಲಾಗಿದೆ. ಯೋಜನೆ ಮತ್ತು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರಮುಖವಾಗಿ ಸೆ.9ರಂದು ವಿಸರ್ಜನೆಗೊಳ್ಳುವ ಹಿಂದು ಮಹಾಸಭಾ ಗಣಪತಿ ಮೆರವಣಿಗೆಗೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಹೇಳಿದರು.
ಫ್ಲೆಕ್ಸ್ ಅಳವಡಿಕೆಯಲ್ಲಿ ಸ್ಪರ್ಧೆ ಬೇಡ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಸ್ಪರ್ಧೆ ಮಾಡುವುದು ಬೇಡ. ಅದರಲ್ಲೂ ಯುವಕರ ನಡುವೆ ವಾದ-ವಿವಾದಗಳು ನಡೆಯುತ್ತಿದ್ದು ಸ್ಥಳೀಯರು ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ರಾತ್ರಿ ವೇಳೆ ಕೆಲ ಕಿಡಿಗೇಡಿಗಳು ಗಲಭೆ ಮಾಡುವ ಪ್ರಯತ್ನಗಳು ನಡೆಸುತ್ತಾರೆ. ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡುವುದರಿಂದ ಕಿಡಿಗೇಡಿಗಳು ಯಾರೇ ಆಗಿದ್ದರೂ ಮುಲಾಜಿಲ್ಲದೇ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೂರ್ನಾಲ್ಕು ಪರ್ಸೆಂಟ್‌ನಷ್ಟು ಮಂದಿ ಮಾತ್ರ ಗಲಭೆ ಎಬ್ಬಿಸುತ್ತಾರೆ. ಅವರಿಗೆ ಕಡಿವಾಣ ಹಾಕಲು ಎಲ್ಲ ರೀತಿ ತಯಾರಿ ಮಾಡಿಕೊಂಡಿದ್ದೇವೆ. ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣಕ್ಕೆ ಗಲಭೆಗಳ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಕೆಲವರು ಹೊರಗಡೆಯಿಂದ ತಂದು ಮಾರಾಟ ಮಾಡುವವರ ಬಗ್ಗೆಯೂ ಈ ಬಾರಿ ನಿಗಾ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಪ್ರಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಉಪಸ್ಥಿತರಿದ್ದರು.