ನ್ಯೂಸ್

ಅರಣ್ಯ ರಕ್ಷಕರು ಸೈನಿಕರಿಗೆ ಸರಿ ಸಮಾನರು: ನ್ಯಾಯಾಧೀಶ ಕೆ.ಎಸ್.ಮಾನು

ಶಿವಮೊಗ್ಗ: ದೇಶದ ಗಡಿ ಕಾಯುವ ಸೈನಿಕರಂತೆ ದೇಶದೊಳಗಿನ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವ ಅರಣ್ಯ ರಕ್ಷಕರ ಕಾರ್ಯ ಯಾವುದೇ ಕೆಲಸಕ್ಕೂ ಕಡಿಮೆ ಅಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಕೆ.ಎಸ್.ಮಾನು ಹೇಳಿದರು.

ನಗರದ ಶ್ರೀಗಂಧ ಕೋಠಿ ಆವರಣದಲ್ಲಿ ಭಾನುವಾರ ಅರಣ್ಯ ಇಲಾಖೆಯ ಶಿವಮೊಗ್ಗ ವೃತ್ತದಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರಿಗೆ ಪುಷ್ಪನಮನದ ಮೂಲಕ ಗೌರವ ಸಲ್ಲಿಸಿ ಮಾತನಾಡಿದ ಅವರು, ಅರಣ್ಯ ರಕ್ಷಕರು ದೇಶ ಕಾಯುವ ಸೈನಿಕರಿಗೆ ಸರಿ ಸಮಾನರು. ಗಡಿಯಲ್ಲಿ ಯೋಧರು ದೇಶವನ್ನು ರಕ್ಷಿಸುವ ಕಾರ್ಯ ಮಾಡಿದರೆ, ದೇಶದೊಳಗೆ ಅರಣ್ಯದ ಜತೆಗೆ ವನ್ಯಜೀವಿಗಳನ್ನೂ ಸಂರಕ್ಷಿಸುವ ಮಹತ್ವದ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ ಎಂದರು.

ಅರಣ್ಯ ರಕ್ಷಣೆ ಮಾಡುವ ಕೆಲಸ ಸುಲಭವಲ್ಲ. ಎಷ್ಟೋ ದಿನ ದಟ್ಟ ಅರಣ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕುಟುಂಬದಿಂದ ದೂರು ಉಳಿಯಬೇಕಾಗುತ್ತದೆ. ಕಾಡುಗಳ್ಳರನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಸಾಕಷ್ಟು ಅಡರು-ತೊಡರು ಎದುರಾದರೂ ಧೈರ್ಯದಿಂದ ಕೆಲಸ ಮಾಡಿ ಅರಣ್ಯ ಸಂಪತ್ತನ್ನು ಉಳಿಸುವ ಕಾರ್ಯ ಅರಣ್ಯ ಇಲಾಖೆಯದ್ದಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಹುತಾತ್ಮರ ಬಗ್ಗೆ ಸಮಾಜಕ್ಕೆ ಸಂದೇಶವನ್ನು ಕೊಡಬೇಕಿದೆ. ಅರಣ್ಯ ಸಂಪತ್ತಿನ ಬಗ್ಗೆ ಜನರಿಗೆ ಅರಿವಿಲ್ಲ. ಅರಣ್ಯ ಎಂದರೇ ಕೇವಲ ಮರಗಿಡಗಳಲ್ಲ. ಅಲ್ಲಿ ಬೇರೆ ಬೇರೆ ಸಂಪತ್ತು ಇರುತ್ತದೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ಮಾತನಾಡಿ, ಅರಣ್ಯ ರಕ್ಷಣೆಗಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಬೇಕಿದೆ. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕು. ತ್ಯಾಗ ಮತ್ತು ಬಲಿದಾನ ವ್ಯರ್ಥವಲ್ಲ, ಸಾರ್ಥಕವಾಗಬೇಕಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಈ.ಶಿವಶಂಕರ್ ಅವರು ಕರ್ತವ್ಯದ ಸಂದರ್ಭದಲ್ಲಿ ಪ್ರಾಣ ಅರ್ಪಿಸಿದ ಅಧಿಕಾರಿಗಳ ಪಟ್ಟಿ ವಾಚಿಸಿದರು. ಅತಿಥಿಗಳು ಹುತಾತ್ಮ ಸ್ಮಾರಕಕ್ಕೆ ಪುಷ್ಪ ಗುಚ್ಚ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಪೊಲೀಸ್ ತಂಡದಿಂದ ಮೂರು ಸುತ್ತು ಕುಶಾಲು ತೋಪು ಹಾರಿಸುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಿಸಿಎಫ್ ಐ.ಎಂ.ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.