ಶಿವಮೊಗ್ಗ: ಮುಂದಿನ 25 ವರ್ಷದಲ್ಲಿ ಭಾರತ ಇಡೀ ವಿಶ್ವದಲ್ಲೇ ಸೂಪರ್ ಪವರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಫ್‌ಐಸಿಸಿಐ (ಫೆಡರೇಷನ್ ಆಫ್ ಇಂಡಿಯಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಛೇರ‌್ಮನ್ ಕೆ. ಉಲ್ಲಾಸ್ ಕಾಮತ್ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಗುರುವಾರ ಇಂಜಿನಿಯರ್ಸ್ ಡೇ ಮತ್ತು ಭಾರತರತ್ನ ಡಾ. ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ, ಕೈಗಾರಿಕಾ ಪ್ರಶಸ್ತಿ ಪ್ರದಾನ, ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪ್ರದಾನ ಹಾಗೂ ಸಂಘದ ನೂತನ ವೆಬ್‌ಸೈಟ್ ಬಿಡುಗಡೆಗೊಳಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಆರ್ಥಿಕತೆಯಲ್ಲಿ ಇಂದು ಭಾರತ 5ನೇ ಸ್ಥಾನಕ್ಕೇರಿದೆ. ಮುಂದಿನ 2027ರ ವೇಳೆಗೆ ಜರ್ಮನಿ, 2030ರ ವೇಳೆ ಜಪಾನ್‌ನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಬರುತ್ತೇವೆ. ಮುಂದಿನ 25 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಮುಂತಾದ ಯೋಜನೆಗಳ ಸಹಾಯದಿಂದ ಯಾವುದೇ ದೇಶಗಳ ಬೆಂಬಲ ಇಲ್ಲದೇ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಪಡೆಯಲಿದ್ದೇವೆ ಎಂದರು.
ದೇಶದ ಅತ್ಯುತ್ತಮ 500 ಕೈಗಾರಿಕೆಗಳಲ್ಲಿ 400 ಕೈಗಾರಿಕೆಗಳ ಕೇಂದ್ರ ಕಚೇರಿಗಳು ಬೆಂಗಳೂರಿನಲ್ಲಿವೆ ಎಂಬುದು ನಮ್ಮ ಹೆಮ್ಮೆ. ರಾಷ್ಟ್ರದಲ್ಲೇ ಅತಿ ವೇಗವಾಗಿ ಕೈಗಾರಿಕೆಗಳು ಬೆಳೆಯುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಶಿವಮೊಗ್ಗದಲ್ಲೂ ಕೈಗಾರಿಕೆಗಳಿಗೆ ಉತ್ತಮ ವಾತಾವರಣ ಇದೆ. ತಂತ್ರಜ್ಞಾನ ಬೆಳೆಸಿಕೊಂಡು ಮುನ್ನಡೆದಿದ್ದೇ ಆದಲ್ಲಿ ಆರ್ಥಿಕತೆಯಲ್ಲಿ ಮತ್ತಷ್ಟು ಏರಿಕೆ ಸಾಧಿಸಬಹುದು ಎಂದು ಹೇಳಿದರು.
2022ನೇ ಸಾಲಿನ ಕೈಗಾರಿಕಾ ಪ್ರಶಸ್ತಿಯನ್ನು ಮೆ. ಸಂತೋಷ್ ಎಂಟರ್‌ಪ್ರೈಸಸ್, ಮೆ. ಸಹ್ಯಾದ್ರಿ ಪಾಲಿಮರ್ಸ್, ಮೆ. ರಾಜಾ ಇಂಜಿನಿಯರಿಂಗ್ ವರ್ಕ್ಸ್ ಅವರಿಗೆ ನೀಡಲಾಯಿತು. ಅತ್ಯುತ್ತಮ ಕಾರ್ಮಿಕ ಪ್ರಶಸ್ತಿಯನ್ನು ಜೆನ್ನಿ ರೀಟ್ರೇಡರ್ಸ್‌ನ ಕೆ. ಗಂಗಾಧರ್, ಮುರುಗೇಶ್ ಟೆಕ್ನಾಲಜೀಸ್‌ನ ಯು. ಮಹೇಂದ್ರ ಅವರಿಗೆ ನೀಡಲಾಯಿತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು. ಭಾಷಣ, ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಮಾಜಿ ಅಧ್ಯಕ್ಷ ಜಿ.ಆರ್.ವಾಸುದೇವ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಜಂಟಿ ಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಮಧುಸೂದನ್ ಐತಾಳ್, ಉದ್ಯಮಿ ಅಶ್ವತ್ಥನಾರಾಯಣ ಶೆಟ್ಟಿ, ಎಂ.ರಾಜು, ಬಿ.ಆರ್.ಸಂತೋಷ್ ಉಪಸ್ಥಿತರಿದ್ದರು.