ನ್ಯೂಸ್

ಶಿಕ್ಷಣ, ಕೈಗಾರಿಕೆಗಳಿಂದ ಅಭಿವೃದ್ಧಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

Shivamogga

ಶಿವಮೊಗ್ಗ: ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಮತ್ತು ಕೈಗಾರಿಕೆಗಳ ಬೆಳವಣಿಗೆಯಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ಶಿಕ್ಷಣ ಮತ್ತು ಕೈಗಾರಿಕಾ ನೀತಿಗಳನ್ನು ಪರಿಣಾಮಕಾರಿಯಾಗಿ ಅನಷ್ಠಾನಗೊಳಿಸುವ ಜವಾಬ್ದಾರಿ ಉದ್ಯಮಿಗಳ ಮೇಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ‘ವಾಣಿಜ್ಯ ಸಪ್ತಾಹ’ ಅಂಗವಾಗಿ ಒಂದು ದಿನದ ರಫ್ತುದಾರರ ಸಮಾವೇಶ ಮತ್ತು ರಫ್ತು ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರೊನಾ ಸಂಕಷ್ಟದಲ್ಲೂ ಸ್ವದೇಶಿ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತೇಜನ ನೀಡುತ್ತಿವೆ. ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ರಫ್ತು ಪ್ರಮಾಣ ಹೆಚ್ಚಿಸಲು ಸರ್ಕಾರದ ನೀತಿಗಳು ಸಹಕಾರಿಯಾಗುತ್ತಿವೆ. ಅವುಗಳನ್ನು ಉದ್ಯಮದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸು ಕಾಣಬಹುದು ಎಂದರು.

ಶಿಕ್ಷಣದಿಂದ ಉತ್ತಮ ಬದಲಾವಣೆ ಸಾಧ್ಯವೆಂದು ಕೇಂದ್ರ ಸರ್ಕಾರ ಎನ್‌ಇಪಿ (ಹೊಸ ಶಿಕ್ಷಣ ನೀತಿ) ಜಾರಿಗೆ ತರುತ್ತಿದೆ. ಅದರೊಂದಿಗೆ ಆರ್ಥಿಕ ಸಹಕಾರ ಮತ್ತು ಆರ್ಥಿಕ ಶಕ್ತಿ ಹೆಚ್ಚಿಸಲು ಚಿಂತನೆ ಮಾಡುತ್ತಿದೆ. ಜತೆಗೆ ಜಾರಿಗೆ ತಂದಿರುವ 2020-25ರ ಕೈಗಾರಿಕಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕಿದೆ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಕೈಗಾರಿಕೋದ್ಯಮಿಗಳಾದ ಎಂ.ಎ.ರಮೇಶ್ ಹೆಗಡೆ, ವಿ.ಘೇವರ್‌ಚಂದ್, ಉಮೇಶ್ ಶಾಸ್ತ್ರಿ, ಎ.ಎಂ.ಸುರೇಶ್ ಇತರರಿದ್ದರು.