ಶಿವಮೊಗ್ಗ: ಅಖಿಲ ಭಾರತ ಸಹಕಾರ ಸಪ್ತಾಹ ನ.14ರಿಂದ 20ರ ವರೆಗೆ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ತಿಳಿಸಿದರು.
ದೇಶಾದ್ಯಂತ ಸಪ್ತಾಹ ಹಮ್ಮಿಕೊಂಡಿದ್ದು, ಜವಾಹರಲಾಲ್ ನೆಹರು ಅವರು ಜನ್ಮದಿನವಾದ ನ.14ರಂದು ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಗುವುದು ಎಂದು ವಿನೋಬನಗರದ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಾಲೂಕು ಕೇಂದ್ರಗಳಲ್ಲಿ ನಡೆಯುವ ಸಪ್ತಾಹಕ್ಕೆ ಸ್ಥಳ ಮತ್ತು ಸಮಯ ನಿಗದಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಪ್ತಾಹಕ್ಕೆ ಸಮಯ ಮತ್ತು ಸ್ಥಳ ಒಂದೆರಡು ದಿನಗಳಲ್ಲಿ ಅಂತಿಮವಾಗಲಿದೆ. ಅಂದು ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್-ಪೋರ್ಟಲ್ ಬಳಕೆ ಕುರಿತು ಸಾಗರದ ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್ ಉಪನ್ಯಾಸ ನೀಡುವರು ಎಂದರು.
ಸಪ್ತಾಹದ ಅಂಗವಾಗಿ ತಾಲೂಕು ಮತ್ತು ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿಗಳಿಗೆ, ಉತ್ತಮ ಸಹಕಾರ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುವುದು. ಜತೆಗೆ ಉತ್ತಮ ಸಹಕಾರಿಗಳನ್ನು ಸನ್ಮಾನಿಸಲಾಗುವುದು ಎಂದರು.
ಯೂನಿಯನ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ರಾಜೋಜಿ ಪಾಟೀಲ್, ಜಯರಾಂ ಗೋಂಧಿ, ನಾಗರಾಜ ಸ್ವಾಮಿ, ಸಂಜೀವ್‌ಕುಮಾರ್, ವಾಟಗೋಡು ಸುರೇಶ್, ಸಿಇಒ ಹಾಲಪ್ಪ, ತರಬೇತಿ ಕೇಂದ್ರದ ಪ್ರಾಚಾರ್ಯ ಎನ್.ರವಿ ಇದ್ದರು.